ADVERTISEMENT

ಸವದಿ ರಾಜೀನಾಮೆ ಪಡೆಯಲು ಆಗ್ರಹ

ಶಾಸಕ ಸಿದ್ದು ಸವದಿ ನಡವಳಿಕೆ ಮಹಿಳೆಗೆ ತೋರಿದ ಅಗೌರವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 2:13 IST
Last Updated 13 ನವೆಂಬರ್ 2020, 2:13 IST
ಡಾ.ಪುಷ್ಪಾ ಅಮರನಾಥ್ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ
ಡಾ.ಪುಷ್ಪಾ ಅಮರನಾಥ್ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ   

ಹುಣಸೂರು: ಬಿಜೆಪಿ ಶಾಸಕ ಸಿದ್ದು ಸವದಿ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಗುರುವಾರ ಇಲ್ಲಿ ಆಗ್ರಹಿಸಿದರು.

‘ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ ವೇಳೆ, ಪುರಸಭೆ ಸದಸ್ಯೆಯೊಂದಿಗಿನ ಅವರ ವರ್ತನೆಯಿಂದ ಮಹಿಳೆಯರ ರಾಜಕೀಯ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಘಟನೆ ನಡೆದು, 54 ಗಂಟೆ ಕಳೆದಿದ್ದರೂ ಅವರ ವಿರುದ್ಧ ಪಕ್ಷವು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ‘ಕೋಮಾ’ಗೆ ಸರಿದಿದೆ ಎನ್ನಲು ಈ ಘಟನೆ ಜೀವಂತ ಉದಾಹರಣೆ. ಮಹಿಳೆ ಎಂಬ ಒಂದೇ ಕಾರಣಕ್ಕೆ ಸ್ಥಳೀಯ ಜನಪ್ರತಿನಿಧಿ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳದೆ ಶಾಸಕರು ಕೈ ಹಿಡಿದು ಎಳೆದಾಡಿರುವುದು ಸಮಂಜಸವೇ’ ಎಂದು ಪ್ರಶ್ನಿಸಿದರು.

ADVERTISEMENT

‘ವಿರೋಧ‍ ಪಕ್ಷದವರು ಎಲ್ಲದಕ್ಕೂ ಟೀಕೆ ಮಾಡುತ್ತಾರೆ ಎನ್ನುವ ಸಚಿವ ಸಿ.ಟಿ.ರವಿ ಈ ಘಟನೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದು ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದರು.

‘ಮಹಿಳೆ ಮೇಲೆ ಯಾವುದೇ ರಾಷ್ಟ್ರೀಯ ‍ಪಕ್ಷದ ಜನಪ್ರತಿನಿಧಿಗಳು ಅಗೌರವದಿಂದ ವರ್ತಿಸಿದಲ್ಲಿ ಪಕ್ಷಾತೀತವಾಗಿ ಮಹಿಳಾ ಸದಸ್ಯೆಯಾಗಿ ಧ್ವನಿ ಎತ್ತಿ ಹೋರಾಟ ನಡೆಸಿ ನ್ಯಾಯ ಕೊಡಿಸುವ ದಿಕ್ಕಿನಲ್ಲಿ ಶ್ರಮಿಸುವುದು ಖಚಿತ’ ಎಂದು ಪ್ರಶ್ಯೆಯೊಂದಕ್ಕೆ ತಿಳಿಸಿದರು.

‘ರಾಷ್ಟ್ರದಲ್ಲಿ ಕೋವಿಡ್ ಸೋಕಿನಿಂದ ಸಾಮಾನ್ಯ ಜನರು ವಿವಿಧ ಸಮಸ್ಯೆಗೆ ಸಿಲುಕಿದ್ದು ಈ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ರಾಜ್ಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಮತ್ತು ಕೃಷಿಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಿ ರೈತನ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.