ADVERTISEMENT

ಚಾಮುಂಡಿಬೆಟ್ಟದ ಉಳಿವಿಗೆ ‘ಬಳಗ’ದ ಕೂಗು

ಜ.4ರಂದು ನಡಿಗೆ ಕಾರ್ಯಕ್ರಮ; ಕೈಜೋಡಿಸಿರುವ ವಿವಿಧ ಸಂಘಟನೆಗಳು

ಎಂ.ಮಹೇಶ
Published 1 ಜನವರಿ 2026, 7:01 IST
Last Updated 1 ಜನವರಿ 2026, 7:01 IST
ಹಸಿರು ಹೊದ್ದ ಚಾಮುಂಡಿಬೆಟ್ಟದ ಒಂದು ನೋಟ
ಹಸಿರು ಹೊದ್ದ ಚಾಮುಂಡಿಬೆಟ್ಟದ ಒಂದು ನೋಟ   

ಮೈಸೂರು: ಜೀವವೈವಿಧ್ಯದ ಸಮೃದ್ಧ ನೆಲೆಯೂ, ಮೈಸೂರಿನ ಮುಕುಟಮಣಿಯೂ ಆಗಿರುವ ಚಾಮುಂಡಿಬೆಟ್ಟವನ್ನು ‘ಸಹಜ ನೈಸರ್ಗಿಕ ತಾಣ’ವಾಗಿಯೇ ಉಳಿಸಿಕೊಳ್ಳಬೇಕೆಂಬ ಕೂಗು ತೀವ್ರಗೊಂಡಿದೆ. ಇದಕ್ಕೆ ದನಿಗೂಡಿಸಿರುವ ಸಮಾನ ಮನಸ್ಕರ ‘‍ಪರಿಸರ ಬಳಗ ಮತ್ತು ಪರಿಸರಕ್ಕಾಗಿ ನಾವು’ ವತಿಯಿಂದ ಜ.4ರಂದು ನಡಿಗೆ ಮೂಲಕ ಜಾಗೃತಿ ಮೊಳಗಲಿದೆ.

ಅಂದು ಬೆಳಿಗ್ಗೆ 7.30ಕ್ಕೆ ಪಾದದಿಂದ ‘ನಡಿಗೆ’ ಆರಂಭಗೊಳ್ಳಲಿದ್ದು, ವಿವಿಧ ಮಠಗಳ ಮಠಾಧೀಶರನ್ನು ಆಹ್ವಾನಿಸಲಾಗಿದೆ. ಹೋರಾಟಗಾರರು, ಪ್ರಜ್ಞಾವಂತರು, ಪರಿಸರಪ್ರೇಮಿಗಳು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಹೆಜ್ಜೆ ಹಾಕಲಿದ್ದಾರೆ. ‘ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಕ್ಕೆ ಅಪಾಯ ತಂದೊದಗಬಾರದು’ ಎಂಬ ಹಕ್ಕೊತ್ತಾಯವನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಟ್ಟಕ್ಕೆ ಆಗುತ್ತಿರುವ ‘ಅಪಾಯಕಾರಿ ಒತ್ತಡ’ ತಪ್ಪಿಸಬೇಕು, ಪ್ರಾಕೃತಿಕ ತಾಣವನ್ನಾಗಿಯೇ ಕಾಪಾಡಿಕೊಳ್ಳಬೇಕು ಎಂಬಿತ್ಯಾದಿ ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡು ‘ಹೆಜ್ಜೆ’ ಸಾಗಲಿದೆ. ಈ ಮೂಲಕ ಸರ್ಕಾರದ ಸರ್ಕಾರದ ಗಮನಸೆಳೆಯುವ ಕೆಲಸವನ್ನು ‘ಬಳಗ’ದ ಪ್ರಜ್ಞಾವಂತರು ಮಾಡುತ್ತಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ತು, ಪಿಯುಸಿಎಲ್‌, ಎಂಸಿಎ, ಯೂತ್ ಫಾರ್‌ ಎಕಾಲಾಜಿಕಲ್‌ ಸಸ್ಟೈನೆಬಿಲಿಟಿ, ಬೆಳವಲ ಹಾಗೂ ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ.

ADVERTISEMENT

ಏಕೆ ಈ ಹೋರಾಟ?: ನಾಡದೇವತೆ ಚಾಮುಂಡೇಶ್ವರಿ ದೇವಾಲಯವನ್ನು ಹೊಂದಿರುವ ಈ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶವೂ ಹೌದು. ಅಪರೂಪದ ಸಸ್ಯಗಳು, ಪ್ರಾಣಿಗಳು, ಚಿಟ್ಟೆಗಳು ಅಪಾರ ಪ್ರಮಾಣದಲ್ಲಿವೆ. ಆಗಾಗ ಚಿರತೆ ಕಾಣಿಸಿರುವುದೂ ಉಂಟು. ಇದು, ಈಗ, ಹಲವು ಕಾರಣಗಳಿಂದಾಗಿ ತನ್ನ ಧಾರ್ಮಿಕ ಪಾವಿತ್ರ್ಯವನ್ನು ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕಳೆದುಕೊಂಡಿದೆ ಎಂಬ ಮಾತುಗಳು ಹೆಚ್ಚುತ್ತಲೇ ಇವೆ. 

‘ಬೆಟ್ಟವೀಗ ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿದ್ದು, ಕಸದ ಕೊಂಪೆಯೂ ಆಗಿ ಬದಲಾಗುತ್ತಿದೆ. ಬೆಟ್ಟದ ಸಂರಕ್ಷಣೆಗೆ ಈಗಿನಿಂದಲೇ ಪ್ರಯತ್ನಗಳನ್ನು ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯಗಳು ಬರುವುದು ನಿಶ್ಚಿತ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಈ ಕಾಳಜಿಯ ಭಾಗವಾಗಿ ನಾವು ಹೋರಾಟಕ್ಕೆ ಚಾಲನೆ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎನ್ನುತ್ತಾರೆ ‘ಬಳಗ’ದವರು.

ಗದಗ ಜಿಲ್ಲೆಯ ಅತ್ಯಮೂಲ್ಯ ಕಪ್ಪತ್ತಗುಡ್ಡವನ್ನು ಉಳಿಸಲು ಅವಿರತ ಹೋರಾಡಿರುವ ಕಪ್ಪತ್ತಗುಡ್ಡ ಸ್ವಾಮೀಜಿ, ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಘಟಕವನ್ನು ಮಠದಲ್ಲಿ ಸ್ಥಾಪಿಸಿರುವ ಬೆಳಗಾವಿ ಜಿಲ್ಲೆಯ ನಿಡಸೋಸಿ ಮಠದ ಸ್ವಾಮೀಜಿ, ಎ.ಟಿ.ರಾಮಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.

ಅತಿರೇಕಕ್ಕೆ ಅವಕಾಶ ಸಲ್ಲದು: ಬೆಟ್ಟದ ಮೇಲೆ ನಡೆಯುತ್ತಿರುವ ಅತಿರೇಕದ ನಿರ್ಮಾಣ ಕಾರ್ಯಗಳು, ಸಂಚಾರ ದಟ್ಟಣೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಬೇಕು ಎನ್ನುವುದು ಅವರ ಮನವಿಯಾಗಿದೆ. ಪರಿಸರ ಸಮತೋಲನ ಕಾಪಾಡಲು ಈ ಕ್ರಮ ಅಗತ್ಯವಾಗಿದೆ ಎಂಬ ಪ್ರತಿಪಾದನೆಯೂ ಅವರದು.

‘ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಬೆಟ್ಟದ ಮೇಲೆ ಒತ್ತಡ ಹೆಚ್ಚಾಗಿದೆ. ರಸ್ತೆ ವಿಸ್ತರಣೆ ಮತ್ತು ಅನಿಯಂತ್ರಿತ ನಿರ್ಮಾಣಗಳಿಂದಾಗಿ ಈಗಾಗಲೇ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ವಾಯು ಹಾಗೂ ಶಬ್ದ ಮಾಲಿನ್ಯ, ಪ್ಲಾಸ್ಟಿಕ್ ಮಾಲಿನ್ಯ, ಅಕ್ರಮ ಒತ್ತುವರಿಯೂ ಬಹುವಾಗಿ ಕಾಡುತ್ತಿದೆ. ಇದೆಲ್ಲವನ್ನೂ ‘ಕರೆಗಂಟೆ’ಯನ್ನಾಗಿ ಪರಿಗಣಿಸಬೇಕು’ ಎಂಬುದು ಅವರ ಕಳಕಳಿಯಾಗಿದೆ. ‘ಬೆಟ್ಟ ಮಟ್ಟವಾಗಲು ಬಿಡಬಾರದು’ ಬಳಗದವರ ಮನವಿಯಾಗಿದೆ.

ನಡಿಗೆಯ ಪ್ರಚಾರ ಕರಪತ್ರ

ಚಾಮುಂಡಿಬೆಟ್ಟದ ಬಗ್ಗೆ ಪ್ರೀತಿ ಅಭಿಮಾನ ಇರುವ ಎಲ್ಲರೂ ಜ.4ರ ನಡಿಗೆಗೆ ಜೊತೆಯಾಗಬೇಕು. ಹೋರಾಟಕ್ಕೆ ಕೈಜೋಡಿಸಬೇಕು

-ಪರಶುರಾಮೇಗೌಡ ಪರಿಸರ ಬಳಗ

ಪರಿಸರಕ್ಕಾಗಿ ನಾವು ಸಂಘಟನೆಯವರು ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮದಿಂದ ಬದಲಾವಣೆ ಸಾಧ್ಯ

-ಎಂ.ಕೆ.ಸೋಮಶೇಖರ್‌ ಮಾಜಿ ಶಾಸಕ

ಹಕ್ಕೊತ್ತಾಯಗಳೇನು?

* ಚಾಮುಂಡಿ ಬೆಟ್ಟದ ಮೇಲೆ ಅನವಶ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಾರದು. * ಬೆಟ್ಟಕ್ಕೆ ಎಲ್ಲಾ ರೀತಿಯ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ. ಸಮೂಹ ಸಾರಿಗೆ ಬಳಕೆಗೆ ಪ್ರೋತ್ಸಾಹ. * ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣವಾಗಿ ತಡೆ. * ಬೆಟ್ಟದ ಧಾರಣಾ ಸಾಮರ್ಥ್ಯದ ಮೌಲ್ಯಮಾಪನ ಮಾಡಿ ಅದರಂತೆ ವೈಜ್ಞಾನಿಕ ಕ್ರಮ ಜರುಗಿಸಬೇಕು. * ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಾಗರಿಕ ಪ್ರತಿನಿಧಿಗಳ ಸಹಭಾಗಿತ್ವ ಪಡೆದುಕೊಳ್ಳಬೇಕು. * ಬೆಟ್ಟದಲ್ಲಿರುವ ವಿವಿಧ ಬಗೆಯ ಅಂಗಡಿಗಳನ್ನು ಹೊಸದಾಗಿ ನಿರ್ಮಿಸಿರುವ ಮಳಿಗೆಗಳಿಗೆ ಸ್ಥಳಾಂತರಿಸಬೇಕು. * ಸಸಿಗಳನ್ನು ನೆಟ್ಟು ಬೆಳೆಸಬೇಕು ಕಸ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. * ಹೊಸದಾಗಿ ನಿರ್ಮಾಣಕ್ಕೆ ಅವಕಾಶ ಕೊಡಕೂಡದು. * ತ್ಯಾಜ್ಯದ ಸಮರ್ಪಕ ಹಾಗೂ ವೈಜ್ಞಾನಿಕ ನಿರ್ವಹಣೆಗೆ ಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.