
ಮೈಸೂರು: ‘ವ್ಯಕ್ತಿ ಸುಂದರವಾಗಿ ಕಾಣಲು ಕೇಶವಿನ್ಯಾಸ ಮಾಡಿಕೊಡುವ ಸವಿತಾ ಸಮಾಜದವರ ಕಲೆ-ಶ್ರಮ ಅತಿಮುಖ್ಯವಾದುದು’ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ಇಲ್ಲಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಸವಿತಾ ಮಹರ್ಷಿ ಸೂರ್ಯವಂಶದ ಮೂಲ ಪುರುಷ. ಅವರ ಇತಿಹಾಸ ಓದಿಕೊಳ್ಳಬೇಕು. ಸಮಾಜದವರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.
‘ಇಂದಿಗೂ ಜಾತಿ, ಧರ್ಮವೇ ಮುಖ್ಯವಾಗಿ ಹೋಗಿರುವುದು ವಿಷಾದನೀಯ’ ಎಂದರು.
‘ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ಮಹಾಪುರುಷರ ತತ್ವ ಸಿದ್ಧಾಂತವನ್ನ ತಿಳಿಸಬೇಕು’ ಎಂದರು.
‘ಸವಿತಾ ಸಮಾಜಕ್ಕೆ ಸರ್ಕಾರ ₹18 ಕೋಟಿ ಅನುದಾನ ನೀಡಿದೆ’ ಎಂದು ಹೇಳಿದರು.
ಸ್ವಾಭಿಮಾನದಿಂದ ಬದುಕಿ:
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಮಾತನಾಡಿ, ‘ಅಂದು ಡಿ.ದೇವರಾಜ ಅರಸು ಹಾಕಿ ಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಸವಿತಾ ಸಮಾಜದದವರು ಹಿಂದಿನ ಕಾಲದಲ್ಲಿದ್ದಂತಹ ಕೆಟ್ಟ ವ್ಯವಸ್ಥೆಯ ಬಗ್ಗೆ ಗಮನಹರಿಸದೇ, ವರ್ತಮಾನಕ್ಕೆ ತಕ್ಕಂತೆ ಜೀವನ ನಡೆಸಬೇಕು’ ಎಂದರು.
‘ಜೀವನ ಬಹಳ ಚಿಕ್ಕದು. ಎಲ್ಲರನ್ನೂ ಪ್ರೀತಿಸಬೇಕು. ಸ್ವಾಭಿಮಾನದಿಂದ ಬದುಕಿ, ಹೋರಾಟಗಳಿಂದ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸಬೇಕು’ ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಸಾಹಿತಿ ಮೈ.ನಾ. ಲೋಕೇಶ್, ‘ಸವಿತಾ ಮಹರ್ಷಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅವರು ತುಂಬಾ ಪ್ರಾವೀಣ್ಯತೆ ಹೊಂದಿದ್ದರು’ ಎಂದು ಸ್ಮರಿಸಿದರು.
‘ಸಮಾಜದಲ್ಲಿ ಸಮುದಾಯಗಳ ಸಂಘಟನೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಕುಟುಂಬವನ್ನು ಕರೆತರಬೇಕು. ಪ್ರತಿ ಗ್ರಾಮದಲ್ಲೂ ಕ್ಷೌರಿಕ ಕುಟೀರ ನಿರ್ಮಿಸಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಮುಖಂಡರಾದ ಎನ್.ಆರ್ ನಾಗೇಶ್, ಎಂ.ಡಿ. ರಾಜೇಶ್, ಹರೀಶ್ ರೆಡ್ಡಿ, ಆನಂದ್, ನಾಗೇಂದ್ರ, ಮುರುಳೀಧರ್, ರಾಮಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.