
ತಿ. ನರಸೀಪುರ: ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳು ಹಾಗೂ ಶೋಷಿತ ಸಮುದಾಯಕ್ಕೆ ಶಿಕ್ಷಣ ದೊರಕಿಸಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನವನ್ನು ಸರ್ಕಾರ ಶಿಕ್ಷಣ ದಿನ ಎಂದು ಘೋಷಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶನಿವಾರ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಅಕ್ಷರದ ಮಾತೆ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಶಿಕ್ಷಣ ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ, ಸ್ವಂತ ಶಿಕ್ಷಣ ಸಂಸ್ಥೆಯನ್ನು ತೆರೆದು ಹೆಣ್ಣು ಮಕ್ಕಳು ಹಾಗೂ ಶೋಷಿತ ಸಮುದಾಯಗಳಿಗೆ ಸಾರ್ವತ್ರಿಕ ಶಿಕ್ಷಣವನ್ನು ಆರಂಭಿಸಿದ ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆಯವರು ಸಾಧನೆಯ ಹೆಗ್ಗರುತು ನೀಡಿದ್ದಾರೆ. ಮನುವಾದಿ ವ್ಯವಸ್ಥೆಯ ನಿಂದನೆ, ಅವಮಾನ ಹಾಗೂ ಅಸಹನೆ ಲೆಕ್ಕಿಸದೇ ಶಿಕ್ಷಣ ನೀಡಿದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನವನ್ನು ಶಿಕ್ಷಣದ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳನ್ನು ಪಬ್ಲಿಕ್ ಶಾಲೆ ಹೆಸರಿನಲ್ಲಿ ಕ್ರೋಢೀಕರಿಸುವ ನೆಪದಲ್ಲಿ ಮುಚ್ಚುತ್ತಿರುವ ಸರ್ಕಾರದ ನಿರ್ಧಾರ ಕೈಬಿಡಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ತಾಲ್ಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಸಂಘಟನಾ ಸಂಚಾಲಕರಾದ ಕರೋಹಟ್ಟಿ ನಾಗೇಶ, ಆಲಗೂಡು ನಾಗರಾಜ್ ಮೂರ್ತಿ, ಕಿರಗಸೂರು ರಜನಿ, ಮುಖಂಡರಾದ ಮಾದಾಪುರ ಉಮೇಶ, ಬನ್ನಹಳ್ಳಿ ದೊರೆಸ್ವಾಮಿ ಹಾಗೂ ಚೌಹಳ್ಳಿ ಮಹದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.