ADVERTISEMENT

ಪರಿಶಿಷ್ಟರ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ: ಆರ್‌.ಧ್ರುವನಾರಾಯಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 5:42 IST
Last Updated 1 ಫೆಬ್ರುವರಿ 2021, 5:42 IST
ಆರ್. ಧ್ರುವನಾರಾಯಣ
ಆರ್. ಧ್ರುವನಾರಾಯಣ   

ಮೈಸೂರು: ‘ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆಗಳ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇತರ ಯೋಜನೆಗಳಿಗೆ ಹೆಚ್ಚು ಹಣವನ್ನು ನಿಯಮ ಬಾಹಿರವಾಗಿ ವರ್ಗಾಯಿಸಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ) ಅಡಿ 2020–21ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾದ ಒಟ್ಟು ₹ 25,616 ಕೋಟಿ ಅನುದಾನದಲ್ಲಿ ಡಿಸೆಂಬರ್‌ವರೆಗೆ ₹12,154 ಕೋಟಿ (ಶೇ 47.45) ವೆಚ್ಚವಾಗಿದೆ. ಪ್ರತಿ ಇಲಾಖೆಯಲ್ಲೂ ಅನುದಾನ ಸದ್ಬಳಕೆ ಆಗಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕಾಂಗ್ರೆಸ್‌ ಹೋರಾಟ ನಡೆಸಬೇಕಾಗುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ಅನುದಾನದ ಹೆಚ್ಚಿನಹಣವನ್ನು ನಿಯಮಬಾಹಿರವಾಗಿ ಮೆಟ್ರೊ, ಭಾರಿ ಸೇತುವೆ ನಿರ್ಮಾಣ ಕಾಮಗಾರಿಗಳಂಥ ಅನ್ಯ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಈ ಬಗ್ಗೆ ವಿಧಾನಸಭೆಯಲ್ಲೂ ಕಾಂಗ್ರೆಸ್ ನಾಯಕರು ದನಿ ಎತ್ತಿದ್ದಾರೆ’ ಎಂದು ಹೇಳಿದರು. ‌

ADVERTISEMENT

ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟ ₹ 3,105 ಕೋಟಿಯಲ್ಲಿ ₹ 1,355 ಕೋಟಿ (ಶೇ 43.63), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೀಸಲಿಟ್ಟ ₹ 1,341 ಕೋಟಿಯಲ್ಲಿ ₹ 585 ಕೋಟಿ (ಶೇ 43.67) ಮಾತ್ರ ವೆಚ್ಚವಾಗಿದೆ. ಸಾಮಾಜಿಕ ನ್ಯಾಯವನ್ನು ಈ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಭಾವನಾತ್ಮಕವಾಗಿ ಮಾತನಾಡಿ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಬಿಜೆಪಿ ನಾಯಕರ ಬದ್ಧತೆ ಸಮುದಾಯಗಳ ಕಲ್ಯಾಣಕ್ಕೆ ಇರಬೇಕು. ಉತ್ತರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿಯಂತಹ ಕಾಂಗ್ರೆಸ್‌ನ ಯೋಜನೆಗಳನ್ನು ಜಾರಿಗೆ ತರಲಿ’ ಎಂದು ಅವರು ಸವಾಲು ಹಾಕಿದರು.

‘ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ನನಗೆ ಯಾವುದೇ ಆಸೆ ಇಲ್ಲ.
ನನಗೆ ಜೀವನ ಕೊಟ್ಟ ಪಕ್ಷ ಕಾಂಗ್ರೆಸ್’ ಎಂದರು.

‘ಯತ್ನಾಳಗೆ ಕಟೀಲ್‌ ಕುಮ್ಮಕ್ಕು’: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಾತನಾಡಲು, ಸರ್ಕಾರ ಕೆಡವಲು, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೇ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರ್‌.ಧ್ರುವನಾರಾಯಣ ಆರೋಪಿಸಿದರು.

‘ಅಧ್ಯಕ್ಷರಾದವರಿಗೆ ತಮ್ಮ ಪಕ್ಷದ ಮೇಲೆ ಹಿಡಿತ ಇರಬೇಕು. ಆದರೆ, ಸರ್ಕಾರದ ವಿರುದ್ಧ ಮಾತನಾಡಿದ ಪಕ್ಷದ ಮುಖಂಡರಾದ ಯತ್ನಾಳ, ವಿಶ್ವನಾಥ್ ಹಾಗೂ ಇತರರ ವಿರುದ್ಧ ಕ್ರಮ ಜರುಗಿಸುವ ಶಕ್ತಿ ಅವರಿಗೆ ಇಲ್ಲ. ಇನ್ನು ನಮ್ಮ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರನ್ನು ಟೀಕಿಸುವುದಕ್ಕೆ ಯಾವ ನೈತಿಕತೆ ಇದೆ?’ ಎಂದರು.

‘ಜೆಡಿಎಸ್‌ಗೆ ಬದ್ಧತೆ ಇಲ್ಲ’: ‘ಜೆಡಿಎಸ್‌ ಸರ್ಕಾರ ರಚಿಸಲು ಕಾಂಗ್ರೆಸ್‌ ಬೆಂಬಲ ನೀಡಿತ್ತು. ಎಚ್‌.ಡಿ.ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ಆಗಿರಬಹುದಿತ್ತು.ಆದರೆ, ಅವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದರಿಂದ ಹಲವರು ಆಸೆ ಆಮಿಷಗಳಿಗೆ ಬಲಿಯಾಗಿ, ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಹೋದರು. ಇದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು’ ಎಂದು ಹೇಳಿದರು.

‘ಕಾಂಗ್ರೆಸ್ ಬೆಂಬಲದಿಂದಲೇ ದೇವೇಗೌಡರುಪ್ರಧಾನಿ ಆಗಿದ್ದು. ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಹೇಗೆ ಅನ್ಯಾಯ ಮಾಡಿದೆ ಎಂಬುದನ್ನು ಅವರೇ ಹೇಳಬೇಕು. ಜೆಡಿಎಸ್‌ಗೆ ಸೈದ್ಧಾಂತಿಕ ಬದ್ಧತೆ ಇಲ್ಲ. ಅದೊಂದು ಅವಕಾಶವಾದಿ ಪಕ್ಷ. ಕೋಮುವಾದಿಗಳು ಎನ್ನುತ್ತಲೇ ಬಿಜೆಪಿ ಜೊತೆ ಕೈ ಜೋಡಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ (ಗ್ರಾಮಾಂತರ) ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡ ಕಳಲೆ ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.