ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: 'ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಪ್ರಧಾನಿ ಆಗಿ 11 ವರ್ಷ ಕಳೆದಿದೆ. ವಾಜಪೇಯಿ ಸಹ ಆರು ವರ್ಷ ಪಿ.ಎಂ. ಆಗಿದ್ದರು. ಹೀಗಿದ್ದು ಏಕೆ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಟಿ/ ಟಿಎಸ್‌ಪಿ ಅನುದಾನ ಖರ್ಚು ಮಾಡಿಲ್ಲ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಪ್ರಶ್ನಿಸಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚಿಸಿ, ಅದರ ಶಿಫಾರಸಿನಂತೆ ವರದಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಏಕೆ ಈ ಕೆಲಸ ಆಗಿಲ್ಲ' ಎಂದು ಪ್ರಶ್ನಿಸಿದರು.
ಬ್ಯಾಗ್ ಲಾಗ್ ಹುದ್ದೆ ಭರ್ತಿ ಸಂಬಂಧ ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಶೀಘ್ರ ಭರ್ತಿ ಮಾಡುತ್ತೇವೆ ಎಂದರು.
'ಮೈಸೂರು ವಿ.ವಿ.ಗೆ ನಿವೃತ್ತ ಸಿಬ್ಬಂದಿಗೆ ವೇತನ ನೀಡಲು ಹಣ ಬಿಡುಗಡೆ ಮಾಡಲಾಗಿದೆ. ಈ ದುಃಸ್ಥಿತಿಗೆ ಹಿಂದಿನ ಕುಲಪತಿಗಳು ಕಾರಣ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು' ಎಂದು ಭರವಸೆ ನೀಡಿದರು.
'ಕೇಂದ್ರ ಎಂಟು ವರ್ಷ ಜಿಎಸ್‌ಟಿ ಹಣ ಮಜಾ ಮಾಡಿ ಈಗ ಕಡಿತಗೊಳಿಸಿದೆ. ರಾಜ್ಯಕ್ಕೆ 6 ಸಾವಿರ ಕೋಟಿ ಆದಾಯ ಕಡಿಮೆ ಆಗಿದೆ' ಎಂದು ಟೀಕಿಸಿದರು.
'ಕಳೆದ 20 ವರ್ಷದಿಂದ ನರೇಗಾ ಅನುದಾನವನ್ನು ಕೇಂದ್ರವೇ ಕೊಡುತ್ತಿತ್ತು. ಈಗ ರಾಜ್ಯವೂ ಶೇ 40ರಷ್ಟು ಪಾಲು ಭರಿಸುವಂತೆ ಹೇಳಿದ್ದಾರೆ. ಆರ್ಥಿಕ ವರ್ಷದ ಮಧ್ಯದಲ್ಲಿ ಈ ಘೋಷಣೆ ಮಾಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ 2500 ಕೋಟಿ ರೂಪಾಯಿ ನಷ್ಟ ಆಗಲಿದೆ. ಈ ಬಗ್ಗೆ ಪ್ರಧಾನಿಗೆ ಈಗಾಗಲೇ ಪತ್ರ ಬರೆದಿದ್ದೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.