
ಮೈಸೂರು: ಇಲ್ಲಿನ ಸಾತಗಳ್ಳಿ ಅಂಬೇಡ್ಕರ್ ಕಾಲೊನಿಗೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಶನಿವಾರ ಭೇಟಿ ನೀಡಿ, ‘ನರ್ಮ್’ ಯೋಜನೆಯ ಮನೆಗಳಲ್ಲಿ ವಾಸವಿರುವ ಅಲೆಮಾರಿ ಸಮುದಾಯದವರ ಕುಂದು-ಕೊರತೆಗಳನ್ನು ಆಲಿಸಿದರು.
ಸ್ಥಳೀಯರಿಂದ ದೂರುಗಳ ಸುರಿಮಳೆಯೇ ಆಯಿತು.
‘ಈ ಕಾಲೊನಿಯಲ್ಲಿ 560 ಗುಂಪು ಮನೆಗಳಿದ್ದು, ನಾವು 15 ವರ್ಷಗಳಿಂದ ವಾಸವಾಗಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಶೌಚಾಲಯ ಹಾಗೂ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಅಂಬೇಡ್ಕರ್ ಸಮುದಾಯ ಭವನದಲ್ಲಿಯೇ ಅಂಗನವಾಡಿ ಕೇಂದ್ರ ಹಾಗೂ ಶಾಲೆ ನಡೆಸಲಾಗುತ್ತಿದೆ. ಸರಿಯಾದ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ’ ಎಂದು ನಿವಾಸಿಗಳು ತಿಳಿಸಿದರು.
‘ಚಿಂತಾಜನಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇರುವುದು ಒಂದೇ ಕೊಳವೆಬಾವಿ. ಇದರಿಂದ ಎಲ್ಲ ಮನೆಗಳಿಗೂ ನೀರನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ತ್ಯಾಜ್ಯ ನಿರ್ವಹಣೆಯೂ ಸರಿಯಾಗಿಲ್ಲ. ಮನೆಗಳ ಸುತ್ತಲೂ ಕಸ ತುಂಬಿರುತ್ತದೆ. ಸ್ವಚ್ಛತೆ ಇಲ್ಲ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಿಸಿಲ್ಲ’ ಎಂದು ದೂರಿದರು.
ಹಲ್ಲೆ ನಡೆದಿದೆ:
‘ಪುಂಡರ ಹಾವಳಿ ಇದೆ. ರಸ್ತೆ ಅಭಿವೃದ್ಧಿಯಾಗಿಲ್ಲ. ಕಟ್ಟಡಗಳ ಚಾವಣಿ ಹಾಳಾಗಿದೆ. ಮಾದಕವಸ್ತು ವ್ಯಸನಿಗಳು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದೂ ಇದೆ. ಕತ್ತಲಾದ ಮೇಲೆ ಓಡಾಡುವುದೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.
‘ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಐದು ವರ್ಷಗಳಿಂದ ಅನುದಾನ ಬಂದಿಲ್ಲ. ಕಸ ವಿಲೇವಾರಿ ಸಂಬಂಧ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಸೈಯದ್ ಫಾತಿಮಾ ಅಸಹಾಯಕತೆ ವ್ಯಕ್ತಪಡಿಸಿದರು.
‘ಕಾಲೊನಿಯಲ್ಲಿ ನಿತ್ಯವೂ ಪೊಲೀಸ್ ಬೀಟ್ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಆರು ತಿಂಗಳಿಗೊಮ್ಮೆ ಯುಜಿಡಿ ಸ್ವಚ್ಛಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಕೊಳಗೇರಿ ಮಂಡಳಿ, ಪಟ್ಟಣ ಪಂಚಾಯಿತಿ ಅಧಿಕಾರಿ-ಸಿಬ್ಬಂದಿ ನಿವಾಸಿಗಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ನಿರ್ವಹಣೆಯನ್ನೂ ಮಾಡಬೇಕು’ ಎಂದು ಅಧ್ಯಕ್ಷರು ಸೂಚಿಸಿದರು.
‘ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತೇನೆ. ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಲ್ಲಿ ಬಹುತೇಕ ಕುಟುಂಬಗಳು ಇಂದಿಗೂ ಸೂರಿಲ್ಲದೆ ಬೀದಿಯಲ್ಲಿವೆ. ಆದ್ದರಿಂದ ಸಂಘಗಳನ್ನು ರಚಿಸಿಕೊಂಡು, ಬೇಡಿಕೆ ಮತ್ತು ಮನವಿಗಳನ್ನು ಕಾಲ ಕಾಲಕ್ಕೆ ಸಲ್ಲಿಸಬೇಕು. ಸರ್ಕಾರದಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಆನಂದ್‌ಕುಮಾರ್ ಏಕಲವ್ಯ, ಉಪಾಧ್ಯಕ್ಷ ವೆಂಕಟಾಚಲ, ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ಮೈಸೂರು ಜಿಲ್ಲಾ ಕೊರಮ-ಕೊರಚ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ಎನ್.ರವಿಕುಮಾರ್, ಉಪಾಧ್ಯಕ್ಷ ರಮೇಶ್, ಮುಖಂಡರಾದ ಗಂಗಪ್ಪ, ಜಯಪ್ರಭು, ಪ್ರಸನ್ನಕುಮಾರ್, ದುರ್ಗಪ್ಪ, ರಾಮಪ್ಪ, ಶಿವಪುತ್ರ, ನಾಗಪ್ಪ ದೊಡ್ಡಮನಿ, ಗಂಗಾಧರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.