ADVERTISEMENT

ವೈಜ್ಞಾನಿಕ ಮನೋಭಾವ ಮೂಡಿಸುವ ಪ್ರಯತ್ನ ಗಟ್ಟಿಗೊಳ್ಳಲಿ: ಶಶಿಧರ ಡೋಂಗ್ರೆ

ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ಶಶಿಧರ ಡೋಂಗ್ರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:20 IST
Last Updated 5 ಜನವರಿ 2026, 6:20 IST
   

ಮೈಸೂರು: ‘ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಲೇಖನ ಪ್ರಕಾರವು ತನ್ನದೇ ಆದ ಅಸ್ಮಿತೆ ಕಾಪಾಡಿಕೊಂಡಿದ್ದು, ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಲೇಖಕರ ಪ್ರಯತ್ನಗಳು ಗಟ್ಟಿಯಾಗಬೇಕಿದೆ’ ಎಂದು ಲೇಖಕ ಶಶಿಧರ ಡೋಂಗ್ರೆ ಹೇಳಿದರು.

ಇಲ್ಲಿ ಭಾನುವಾರ ನಡೆದ ನವಕರ್ನಾಟಕ ಪ್ರಕಾಶನದ ವಿಸ್ತೃತ ಮಳಿಗೆಯ ಶುಭಾರಂಭ ಮತ್ತು ಜೆ.ಎಲ್‌.ಅನಿಲ್‌ ಕುಮಾರ್ ಅವರ ಇಂಗ್ಲಿಷ್ ಅನುವಾದಿತ ಕೃತಿ ‘ಚಾರ್ಮಿಂಗ್ ಮೂಮೆಂಟ್ಸ್ ವಿಥ್ ಸೈಟಿಂಸ್ಟ್’ ಹಾಗೂ ಕೊಳ್ಳೇಗಾಲ ಶರ್ಮ ಅವರ ವಿಜ್ಞಾನ ಕಥೆಗಳ ಸಂಕಲನ ‘ಬೆರಗಿನ ಬಾಗಿಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ದೈನಂದಿನ ಬದುಕನ್ನು ಆವರಿಸಿಕೊಂಡಿದೆ. ಕನ್ನಡದಲ್ಲಿ ಈ ಬರಹಗಳಿಗೆ ಬೇಡಿಕೆ ಇದ್ದು, ಲೇಖಕರು ಪರಿಣಾಮಕಾರಿಯಾಗಿ ಬರೆಯುಬೇಕು’ ಎಂದರು.

ADVERTISEMENT

‘ಚಾರ್ಮಿಂಗ್ ಮೂಮೆಂಟ್ಸ್ ವಿಥ್ ಸೈಟಿಂಸ್ಟ್’ ಕೃತಿ ವಸ್ತುನಿಷ್ಠವಾಗಿದೆ. ವಿಜ್ಞಾನಿಗಳೊಂದಿಗಿನ ಆಕರ್ಷಕ ಕ್ಷಣಗಳು, ಆವಿಷ್ಕಾರಗಳನ್ನು ಒಳಗೊಂಡಿದೆ. ಸಂಶೋಧನೆಯೊಂದಿಗೆ ಸಂಬಂಧಿತ ಹೋರಾಟಗಳನ್ನು ಹಾಸ್ಯಮಯವಾಗಿ ಬಿಂಬಿಸಲಾಗಿದೆ. ಬರಹದಲ್ಲಿ ವಿವೇಚನೆ, ಜೀವನ ಮೌಲ್ಯ ಬಿಂಬಿಸುತ್ತದೆ. ಒಟ್ಟು 88 ಲೇಖನಗಳಿವೆ. ಪದಗುಚ್ಛ ಹಾಗೂ ಅಲ್ಪವಿರಾಮ, ಪೂರ್ಣವಿರಾಮ ಲೇಖನ ಚಿಹ್ನೆಗಳ ಬಳಕೆ ಚೆನ್ನಾಗಿದೆ ಎಂದು ಪ್ರಶಂಸಿಸಿದರು.

‘ಬೆರಗಿನ ಬಾಗಿಲು’ ನಿರಂತರತೆಯಿಂದ ಕೂಡಿದ್ದು, ಬೆರಗು ಮೂಡಿಸುತ್ತದೆ. 8 ಕಥೆಗಳಿವೆ. ವಿಜ್ಞಾನದ ಹಲವು ತಂತ್ರಜ್ಞಾನ ಬಳಸಿಕೊಂಡು ಕಲಾತ್ಮಕವಾಗಿ ಕಥೆ ಹೆಣೆಯಲಾಗಿದೆ‘ ಎಂದರು.

ಲೇಖಕ ಜೆ.ಎಲ್.ಅನಿಲ್ ಕುಮಾರ್ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಎಸ್‌.ಎನ್‌.ಪ್ರಸಾದ್, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಪಾಟೀಲ, ಶಾಖಾ ವ್ಯವಸ್ಥಾಪಕ ಎನ್‌.ಕೆ.ಸತ್ಯನಾರಾಯಣ ಪಾಲ್ಗೊಂಡಿದ್ದರು.

‘ವಿಜ್ಞಾನ ಪ್ರಕಾರಗಳ ಕಥೆ ಹೆಚ್ಚು ಬರೆದಿಲ್ಲ’

ಲೇಖಕ ಕೊಳ್ಳೇಗಾಲ ಶರ್ಮ ಮಾತನಾಡಿ ‘ಕನ್ನಡದಲ್ಲಿ ವಿಜ್ಞಾನ ಪ್ರಕಾರಗಳ ಕಥೆಗಳು ಹೆಚ್ಚು ಬರೆದಿಲ್ಲ. ವಿಷಯ ವಸ್ತು ಕೊರತೆ ಅಥವಾ ಓದುಗರು ಇಲ್ವಾ ಎನ್ನುವ ಪ್ರಶ್ನೆ ಕಾಡುತ್ತಿತ್ತು. ವಿಜ್ಞಾನ ಕಥೆ ಬಳಸಿಕೊಂಡರೆ ಸಮರ್ಥವಾಗಿ ಹೇಳಲು ಸಾಧ್ಯವಿಲ್ಲ ಎನ್ನುವ ಭಾವನೆಯೂ ಇತ್ತು. ಹೀಗಾಗಿ ಹೆಚ್ಚಿನ ಮಟ್ಟಿಗೆ ಆ ದೃಷ್ಟಿಯಲ್ಲಿ ಕಟ್ಟಿದ ಕೃತಿ ಇದು. ಇವುಗಳಲ್ಲಿ ನಾಳೆ ಇವತ್ತು ಎರಡೂ ಕಾಣುತ್ತೇವೆ. ನಮ್ಮ– ನಿಮ್ಮ ಮಧ್ಯೆ ನಡೆಯುತ್ತಿರುವ ಹಲವು ವಿದ್ಯಮಾನ ಒಳಗೊಂಡಿದೆ’ ಎಂದರು.

ಕೃತಿ ಪರಿಚಯ: 

ಕೃತಿ: ‘ಚಾರ್ಮಿಂಗ್ ಮೂಮೆಂಟ್ಸ್ ವಿಥ್ ಸೈಟಿಂಸ್ಟ್’ 

ಲೇಖಕ: ಜೆ.ಎಲ್‌.ಅನಿಲ್‌ ಕುಮಾರ್

ಪ್ರಕಾಶನ: ನವಕರ್ನಾಟಕ

ದರ: ₹160

ಪುಟ: 112

ಕೃತಿ ಪರಿಚಯ: 

ಕೃತಿ: ‘ಬೆರಗಿನ ಬಾಗಿಲು’

ಲೇಖಕ: ಕೊಳ್ಳೇಗಾಲ ಶರ್ಮ

ಪ್ರಕಾಶನ: ನವಕರ್ನಾಟಕ

ದರ: ₹125

ಪುಟ: 96