ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರತಿನಿಧಿ ಸಭೆ ಜುಲೈ 1 ಮತ್ತು 2ರಂದು ನಗರದ ಹೈವೆ ವೃತ್ತದ ಬಳಿ ಇರುವ ನಲಪಾಡ್ ಹೋಟೆಲ್‌ನಲ್ಲಿ ನಡೆಯಲಿದೆ.
ಎಸ್‌ಡಿಪಿಐ ರಾಷ್ಟ್ರ ಘಟಕದ ಉಪಾಧ್ಯಕ್ಷ ಶರಫುದ್ದೀನ್ ಲಕ್ನೋ ಜುಲೈ 1ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು ಭಾಗವಹಿಸುವರು. 3 ವರ್ಷದ ಅವಧಿಗೆ ಪಕ್ಷದ ನಾಯಕರು, 21 ಮಂದಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಕಾರ್ಯಚಟುವಟಿಕೆ, ಭವಿಷ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಲಾಗಿದೆ. ಎಸ್‌ಡಿಪಿಐ ಇತರೆ ರಾಜಕೀಯ ಪಕ್ಷಗಳಂತಲ್ಲ. ಇದೊಂದು ಚಳವಳಿ ಎಂದರು.
ವಾರ್ಡ್ ಮೀಸಲಾತಿ ಅವೈಜ್ಞಾನಿಕ: ನಗರ ಪಾಲಿಕೆ ವಾರ್ಡ್ ಮರುವಿಂಗಡಣೆ ಸಮಯದಲ್ಲಿ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ. ಉದಯಗಿರಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರೂ, ಮೀಸಲು ಕ್ಷೇತ್ರವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮರುವಿಂಗಡಣೆಗೆ ತಕರಾರಿಲ್ಲ. ಕೆಲವು ವಾರ್ಡ್‌ಗಳಲ್ಲಿ ಕಡಿಮೆ ಜನರಿದ್ದು, ಮತ್ತೆ ಕೆಲವೆಡೆ ಹೆಚ್ಚು ಜನರಿದ್ದಾರೆ. ಪ್ರತಿ ವಾರ್ಡ್‌ಗೆ 15,000 ಜನಸಂಖ್ಯೆ ಎಂದು ನಿಯಮ ಮಾಡಿರುವುದು ಸೂಕ್ತವಾಗಿದೆ. ಆದರೆ ಆಗಿರುವ ಲೋಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ರಾಜ್ಯ ಘಟಕದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ‘ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ ತಮ್ಮ ಅಸ್ತಿತ್ವಕ್ಕೆ ಪೆಟ್ಟುಬೀಳುತ್ತದೆ ಎಂದು ಎಸ್‌ಡಿಪಿಐ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್, ನಗರ ಘಟಕದ ಅಧ್ಯಕ್ಷ ಆಝಾಂ ಪಾಷ, ಪಾಲಿಕೆ ಸದಸ್ಯ ಎಸ್.ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.