ADVERTISEMENT

ನಂಜನಗೂಡು | ದ್ವಿತೀಯ ಸಂಪರ್ಕಿತರಿಗೂ ಕೋವಿಡ್, ಮತ್ತಷ್ಟು ಬಿಗಿ ಇಂದಿನಿಂದ

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

ಡಿ.ಬಿ, ನಾಗರಾಜ
Published 21 ಏಪ್ರಿಲ್ 2020, 19:43 IST
Last Updated 21 ಏಪ್ರಿಲ್ 2020, 19:43 IST
ನಂಜನಗೂಡಿನ ಔಷಧ ಕಾರ್ಖಾನೆಗೆ ಸಚಿವರಾದ ಎಸ್‌.ಟಿ.ಸೋಮಶೇಖರ್, ಸುಧಾಕರ್, ಶಾಸಕ ಹರ್ಷವರ್ಧನ್ ಮಂಗಳವಾರ ಭೇಟಿ ನೀಡಿ ಜಿಲ್ಲಾಡಳಿತದ ಅಧಿಕಾರಿಗಳಿಂದ ಮಾಹಿತಿ ಪಡೆದರು
ನಂಜನಗೂಡಿನ ಔಷಧ ಕಾರ್ಖಾನೆಗೆ ಸಚಿವರಾದ ಎಸ್‌.ಟಿ.ಸೋಮಶೇಖರ್, ಸುಧಾಕರ್, ಶಾಸಕ ಹರ್ಷವರ್ಧನ್ ಮಂಗಳವಾರ ಭೇಟಿ ನೀಡಿ ಜಿಲ್ಲಾಡಳಿತದ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಮೈಸೂರು: ‘ಶತಕ’ದತ್ತ ಹೆಜ್ಜೆ ಹಾಕುತ್ತಿರುವ ಕೋವಿಡ್–19 ರೋಗಿಗಳ ಸಂಖ್ಯೆ ತಡೆಗಟ್ಟಲು ಜಿಲ್ಲಾಡಳಿತ ನಂಜನಗೂಡಿನಲ್ಲಿ ಬುಧವಾರದಿಂದ ಮತ್ತಷ್ಟು ಬಿಗಿ ಕ್ರಮಕ್ಕೆ ಮುಂದಾಗಿದೆ.

‘ನಂಜನಗೂಡಿನ ನಂಜು’ ಗ್ರಾಮೀಣ ಪರಿಸರಕ್ಕೂ ಪಸರಿಸುತ್ತಿದೆ. ಔಷಧ ಕಾರ್ಖಾನೆಯ ಮೊದಲ ಸೋಂಕಿತ (ರೋಗಿ ಸಂಖ್ಯೆ–52)ನ ಎರಡನೇ ಸಂಪರ್ಕಕಕ್ಕೆ ಬಂದವರಲ್ಲೂ ಕೋವಿಡ್‌ ದೃಢಪಡುತ್ತಿದ್ದು, ಆತಂಕ ಹೆಚ್ಚಿಸಿದೆ.

ನಂಜನಗೂಡು ನಗರದಲ್ಲಿ 25 ಪ್ರಕರಣ ಪತ್ತೆಯಾಗಿದ್ದರೆ, ಗ್ರಾಮೀಣದಲ್ಲಿ 30 ಪ್ರಕರಣ ದಾಖಲಾಗಿವೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮತ್ತಷ್ಟು ಪೊಲೀಸ್ ಸರ್ಪಗಾವಲು ಹೆಚ್ಚಿಸಿದೆ.

ADVERTISEMENT

ವಲಯ ವಿಂಗಡಣೆ: ನಂಜನಗೂಡು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಿಗಾ ವಹಿಸಲಿಕ್ಕಾಗಿ ಎರಡು ವಲಯವನ್ನಾಗಿ ಮಾಡಿಕೊಳ್ಳಲಾಗಿದೆ.

ಮತ್ತೆ ಇದರೊಳಗೂ ವಲಯ ಮಾಡಿಕೊಂಡಿದ್ದು, ನಂಜನಗೂಡಿನಲ್ಲಿ 14 ಇದ್ದರೆ, ಗ್ರಾಮಾಂತರದಲ್ಲಿ 11 ವಲಯಗಳಿವೆ. ಇವು ಕೋವಿಡ್ ಪೀಡಿತರು ವಾಸವಿದ್ದ ಪ್ರದೇಶಗಳು. ಇಲ್ಲಿಗೆ ಅಧಿಕಾರಿಗಳನ್ನು ನೇಮಿಸಿ ಉಸ್ತುವಾರಿಯ ಹೊಣೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಈ 25 ವಲಯದಿಂದ ಮುಂದಿನ 28 ದಿನ ಯಾರೊಬ್ಬರೂ ಹೊರ ಹೋಗುವಂತಿಲ್ಲ. ಹೊರಗಿನವರು ಒಳಗೆ ಬರುವಂತಿಲ್ಲ’ ಎಂದು ಹೆಸರು ಬಹಿರಂಗ ಪಡಿಸಬಾರದು ಎಂಬ ಷರತ್ತಿನೊಂದಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮತ್ತಷ್ಟು ನಿಗಾ: ‘ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ಹೆಚ್ಚಿಸಲಿಕ್ಕಾಗಿ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ದ್ವಿತೀಯ ಸಂಪರ್ಕಿತರಲ್ಲೂ ಕೋವಿಡ್ ದೃಢಪಡುತ್ತಿದೆ. ಇದರಿಂದಾಗಿ ಮತ್ತೊಮ್ಮೆ ಔಷಧ ಕಾರ್ಖಾನೆಯ ನೌಕರರು, ಇವರಿಂದ ಬಾಧಿತರಾದವರು, ಸಂಪರ್ಕಕಕ್ಕೆ ಬಂದ ಕುಟುಂಬ ವರ್ಗದವರ ಮೇಲೆ ಹೆಚ್ಚಿನ ನಿಗಾವಿಡಲು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಬ್ಯಾರಿಕೇಡ್ ಹಾಕಿ ಸಂಪರ್ಕವನ್ನೇ ಸ್ಥಗಿತಗೊಳಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.