ADVERTISEMENT

‘75ರ ಕೃಷಿಕನ ಬದುಕು’ ವಿಚಾರಸಂಕಿರಣ 16ರಂದು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:05 IST
Last Updated 13 ಆಗಸ್ಟ್ 2022, 16:05 IST
ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್   

ಮೈಸೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಆ.16ರಂದು ಮಧ್ಯಾಹ್ನ 2ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ‘75ರ ಕೃಷಿಕನ ಬದುಕು’ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ತೆಲಂಗಾಣದ ರೈತ ಬಂಧು ಸಮಿತಿಯ ಅಧ್ಯಕ್ಷ ಪಲ್ಲಂ ರಾಜಶೇಖರ ರೆಡ್ಡಿ ಉದ್ಘಾಟಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ನರಸಿಂಹನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಕುಲಪತಿ ಎಸ್‌.ಬಿ.ದಂಡಿನ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ವಿದ್ಯುತ್‌ ಖಾಸಗೀಕರಣದ ವಿರುದ್ಧ ಆ.22ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ರೈತರ ಸಾಲ ಮನ್ನಾಕ್ಕೆ ಹಾಗೂ ಮೊಸರು, ಮಜ್ಜಿಗೆ, ಹಪ್ಪಳ, ಬೆಲ್ಲ, ಕೃಷಿ ಪರಿಕರಗಳು, ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸುವಂತೆ ಒತ್ತಾಯಿಸಲಾಗುವುದು’ ಎಂದರು.

ADVERTISEMENT

‘ಆ.30ರ ಒಳಗೆ ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹಾಗೂ ಉದ್ಯಮಿಗಳ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

‘ರೈತರಿಗೆ ಅಲೆದಾಟವಿಲ್ಲದೆ ಸಾಲ ನೀಡಬೇಕೆಂಬ ನಿಯಮವಿದ್ದರೂ ಉಪ ನೋಂದಣಿ ಕಚೇರಿಗಳ ಅಧಿಕಾರಿಗಳು ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್‌ಗೆ ಎಂದು ₹ 400ರಿಂದ ₹500 ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಮುಖಂಡರಾದ ಬರಡನಪುರ ನಾಗರಾಜು, ಲಕ್ಷ್ಮೀಪುರ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.