ADVERTISEMENT

ಮೋದಿ ಸಲಹೆಯಂತೆ ವರ್ಚುವಲ್‌ ಪ್ರಯೋಗಾಲಯ ಸ್ಥಾಪನೆ: ಡಾ.ಶೇಖರ್‌ ಸಿ.ಮಂಡೆ

ಮೈಸೂರು ವಿ.ವಿ 101ನೇ ಘಟಿಕೋತ್ಸವದಲ್ಲಿ ಡಾ.ಶೇಖರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 10:17 IST
Last Updated 7 ಸೆಪ್ಟೆಂಬರ್ 2021, 10:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಅಧ್ಯಕ್ಷರೂ ಆಗಿರುವ ಪ್ರಧಾನಿ ಮೋದಿ ಸಲಹೆ ಮೇರೆಗೆ ವರ್ಚುವಲ್‌ ಪ್ರಯೋಗಾಲಯ ಸ್ಥಾಪಿಸಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ನವದೆಹಲಿಯ ಡಿಎಸ್‌ಐಆರ್‌ ಕಾರ್ಯದರ್ಶಿ ಹಾಗೂ ಸಿಎಸ್‌ಐಆ‌ರ್‌ ಮಹಾನಿರ್ದೇಶಕ ಡಾ.ಶೇಖರ್‌ ಸಿ.ಮಂಡೆ ತಿಳಿಸಿದರು.

ಮಂಗಳವಾರ ಇಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ‘‌ಬಹುಮಾಧ್ಯಮ ಡಿಜಿಟಲ್‌ ವೇದಿಕೆಗಳ ಮೂಲಕ ವೈಜ್ಞಾನಿಕ ಜ್ಞಾನ ಪಸರಿಸಲು ಇದರಿಂದ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಸ್ವ–ಕಲಿಕೆ ಕೌಶಲ ವೃದ್ಧಿಯಾಗುವುದರ ಜೊತೆಗೆ ಕ್ರಿಯಾಶೀಲತೆಯನ್ನೂ ಹೆಚ್ಚಿಸಲಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿರಲಿದೆ. ಹೀಗಾಗಿ, ತಾವು ಯಾವುದೇ ವಿಷಯ ಕಲಿಯುತ್ತಿದ್ದರೂ ತಂತ್ರಜ್ಞಾನ ಕೇಂದ್ರಿತ ಆವಿಷ್ಕಾರದ ಜೊತೆ ಸಂ‍ಬಂಧ, ಸಂಪರ್ಕ ಹೊಂದಿರುತ್ತೀರಿ’ ಎಂದು ನುಡಿದರು.

ADVERTISEMENT

‘ತಂತ್ರಜ್ಞಾನ ಬಳಸುವುದರಲ್ಲಿ ಈ ಕಾಲದ ವಿದ್ಯಾರ್ಥಿಗಳು ನಿಪುಣರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ–2020 ಕೂಡ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದೆ’ ಎಂದು ತಿಳಿಸಿದರು.

‘ವಿಶೇಷವೆಂದರೆ ಕೋವಿಡ್‌ಗೆ ಮುನ್ನವೇ ಮೈಸೂರು ವಿಶ್ವವಿದ್ಯಾಲಯ ಆನ್‌ಲೈನ್‌ ಶಿಕ್ಷಣ ಶುರು ಮಾಡಿತ್ತು. ಕೋವಿಡ್‌ನಿಂದಾಗಿ ಜಾಗತಿಕವಾಗಿ ಆನ್‌ಲೈನ್‌ ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಹಾಯವಾಗಿದೆ. ಯಾವುದೇ ರೀತಿಯ ಕಲಿಕೆ ಇದ್ದರೂ ಶಿಕ್ಷಕರ ಪಾತ್ರ ಅನನ್ಯವಾದದು. ಶಿಕ್ಷಣ ನೀಡುವುದು ಮಾತ್ರವಲ್ಲ; ಬೋಧನೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಪ್ರತಿಪಾದಿಸಿದರು.‌

‘ಏನೇ ಕೆಲಸ ಮಾಡಿದರೂ ಅದರಲ್ಲಿ ಮಾನವೀಯತೆ ಇರಬೇಕು. ಪರಿಸರ, ಪ್ರಕೃತಿಯನ್ನೂ ಮಾನವೀಯತೆಯಿಂದ ಕಾಣಬೇಕು. ಜೊತೆಗೆ ಅನುಕಂಪವೂ ಇರಲಿ’ ಎಂದು ಕಿವಿಮಾತು ಹೇಳಿದರು.

ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಜ್ಞಾನಪ್ರಕಾಶ್‌ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.