ADVERTISEMENT

ಪರಿಶಿಷ್ಟ ಜಾತಿ ಲೈಂಗಿಕ ಕಾರ್ಯಕರ್ತೆಯರಿಗೆ ಸೌಲಭ್ಯ: ಕಿಶನ್‌ ಮಕ್ವಾನ ಭರವಸೆ

ರಾಷ್ಟ್ರೀಯ ಎಸ್‌ಸಿ ಆಯೋಗದ ಅಧ್ಯಕ್ಷ ಕಿಶೋರ ಮಕ್ವಾನಾ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 22:46 IST
Last Updated 19 ಅಕ್ಟೋಬರ್ 2024, 22:46 IST
ಮೈಸೂರಿನಲ್ಲಿ ಆಶೋದಯ ಸಮಿತಿಯು ಶನಿವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಲೈಂಗಿಕ ಕಾರ್ಯಕರ್ತೆಯರ ಮತ್ತು ಅಪಾಯದ ಅಂಚಿನಲ್ಲಿರುವ ಮಹಿಳೆಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಕಿಶೋರ ಮಕ್ವಾನಾ ಮಾತನಾಡಿದರು. ಲಕ್ಷ್ಮಿ, ವೇಣುಕುಮಾರ್‌ ಭಾಗವಹಿಸಿದ್ದರು
ಮೈಸೂರಿನಲ್ಲಿ ಆಶೋದಯ ಸಮಿತಿಯು ಶನಿವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಲೈಂಗಿಕ ಕಾರ್ಯಕರ್ತೆಯರ ಮತ್ತು ಅಪಾಯದ ಅಂಚಿನಲ್ಲಿರುವ ಮಹಿಳೆಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಕಿಶೋರ ಮಕ್ವಾನಾ ಮಾತನಾಡಿದರು. ಲಕ್ಷ್ಮಿ, ವೇಣುಕುಮಾರ್‌ ಭಾಗವಹಿಸಿದ್ದರು   

ಮೈಸೂರು: ‘ಪರಿಶಿಷ್ಟ ಜಾತಿಯ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಪಾಯದ ಅಂಚಿನಲ್ಲಿರುವ ಮಹಿಳೆಯರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಲು ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಅಗತ್ಯವಿರುವ ಗುರುತಿನ ಚೀಟಿಗಳನ್ನು ದೊರಕಿಸಲಾಗುವುದು’ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಕಿಶನ್‌ ಮಕ್ವಾನ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ಆಶೋದಯ ಸಮಿತಿಯು ಏರ್ಪಡಿಸಿದ್ದ, ಪರಿಶಿಷ್ಟ ಜಾತಿಯ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಪಾಯದ ಅಂಚಿನಲ್ಲಿರುವ ಮಹಿಳೆಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರಿ ದಾಖಲೆಗಳಿಲ್ಲದೆ ಲೈಂಗಿಕ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಾಖಲೆಗಳನ್ನು ಮಾಡಿಸಲು ಅವರಿಗೆ ಮನೆ ವಿಳಾಸ ಹಾಗೂ ಇನ್ನಿತರ ಗೋಪ್ಯ ಮಾಹಿತಿ ನೀಡಲು ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆ ಬಗ್ಗೆ ತಿದ್ದುಪಡಿ ತರಲು ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.

‘ಈ ಭಾಗದ ಕೆಲವು ಲೈಂಗಿಕ ಕಾರ್ಯಕರ್ತೆಯರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ಅವರ ಬಳಿ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಆಯುಷ್ಮಾನ್‌ ಕಾರ್ಡ್‌ಗಳೇ ಇಲ್ಲ. ಹೀಗಾಗಿ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಎಚ್‌ಐವಿ ಸೋಂಕಿತರಾದ ಅನೇಕರಿಗೆ ಸರ್ಕಾರದ ಸೌಲಭ್ಯಗಳ ಅರಿವೇ ಇಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರೊಂದಿಗೆ ಚರ್ಚಿಸಿ, ಇಂದಿನ ಕಾರ್ಯಕ್ರಮದಲ್ಲೇ ಲೈಂಗಿಕ ಕಾರ್ಯಕರ್ತೆಯರಿಂದ ಸರ್ಕಾರಿ ದಾಖಲೆಗಾಗಿ ಅರ್ಜಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಅವರನ್ನು ಸಮಾಜದ ಮುನ್ನೆಲೆಗೆ ತರಲು ಕ್ರಮ ವಹಿಸಲಾಗುವುದು’ ಎಂದರು.

ಆಶೋದಯ ಸಮಿತಿಯ ನಿರ್ದೇಶಕಿ ಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.