ADVERTISEMENT

ಬಾಲಕಿ ಜತೆ ಅಸಭ್ಯ ವರ್ತನೆ: ಆರೋಪಿಗೆ 2 ವರ್ಷ ಶಿಕ್ಷೆ ವಿಧಿಸದ ‘ಪೋಕ್ಸೊ’ನ್ಯಾಯಾಲಯ

ಆರೇ ತಿಂಗಳಲ್ಲಿ ಪ್ರಕರಣ ಇತ್ಯರ್ಥ, ನಾಲ್ವರೇ ಸಾಕ್ಷಿಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 7:29 IST
Last Updated 30 ಆಗಸ್ಟ್ 2018, 7:29 IST
   

ಮೈಸೂರು: ಕುಡಿಯುವ ನೀರಿನ ಕ್ಯಾನ್‌ ಸರಬರಾಜು ಮಾಡಲು ಹೋಗಿ ಮನೆಯಲ್ಲಿದ್ದ 10 ವರ್ಷದ ಬಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಕೆ.ಆರ್.ಪೇಟೆ ತಾಲ್ಲೂಕಿನ ಗೋವಿಂದನಹಳ್ಳಿಯ ನವೀನ್‌ (22) ಎಂಬಾತನಿಗೆ ಇಲ್ಲಿನ ‘ಪೋಕ್ಸೊ’ ನ್ಯಾಯಾಲಯ ಆರೇ ತಿಂಗಳಲ್ಲಿ 2 ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

ಪ್ರಕರಣದ ವಿವರ: ಬಾಲಕಿಯ ತಾಯಿ ಉದ್ಯೋಗದಲ್ಲಿದ್ದು, ನಿತ್ಯ ಬೆಳಿಗ್ಗೆ ಹೋಗಿ ಸಂಜೆ ಮನೆಗೆ ಬರುತ್ತಿದ್ದರು. ಫೆಬ್ರುವರಿ 17ರಂದು ಬಾಲಕಿಗೆ ಶಾಲೆಗೆ ರಜೆ ಇತ್ತು. ಹೀಗಾಗಿ, ಆಕೆ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ನೀರಿನ ಕ್ಯಾನ್ ನೀಡಲು ಬಂದ ನವೀನ್‌ಗೆ ಬಾಲಕಿಯು ನೀರಿದೆ ಬೇಡ ಎಂದು ಹೇಳಿದ್ದಾಳೆ.

‘ಇರುವ ನೀರನ್ನು ಚೆಲ್ಲಿ ಕ್ಯಾನ್ ಕೊಡು, ಹೊಸ ನೀರಿನ ಕ್ಯಾನ್ ಕೊಡುತ್ತೇನೆ’ ಎಂದು ನವೀನ್‌ ಒತ್ತಾಯಿಸಿದ್ದಾನೆ. ಬಾಲಕಿಯು ಕ್ಯಾನ್‌ನಲ್ಲಿದ್ದ ನೀರನ್ನು ಚೆಲ್ಲಿ ತರುವಷ್ಟರಲ್ಲಿ ನವೀನ್‌ ತನ್ನ ಪ್ಯಾಂಟ್ ಹಾಗೂ ಒಳ ಉಡುಪುಗಳನ್ನು ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದಾನೆ. ಇದನ್ನು ಕಂಡು ಹೌಹಾರಿದ ಬಾಲಕಿ ತಕ್ಷಣ ಬಾಗಿಲು ಹಾಕಿ ಕೂಗಾಡಿದ್ದಾಳೆ. ಧ್ವನಿ ಕೇಳಿ ಅಕ್ಕಪಕ್ಕದವರು ಬಂದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.

ADVERTISEMENT

ತಾಯಿ ಸಂಜೆ ಬಂದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಮರುದಿನ ಬೆಳಿಗ್ಗೆ ತಾಯಿ ವಿ.ವಿ.ಪುರಂ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನವೀನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸ‌ಲ್ಲಿಸಿದರು.

ಆರೇ ತಿಂಗಳಲ್ಲಿ ಪ್ರಕರಣ ಇತ್ಯರ್ಥ, ನಾಲ್ವರೇ ಸಾಕ್ಷಿಗಳು

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಆರೇ ತಿಂಗಳಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸಾಕ್ಷಿಯಾಗಿ ಬಾಲಕಿ ಹಾಗೂ ಆಕೆಯ ತಾಯಿಯ ಹೇಳಿಕೆ ಹಾಗೂ ಇಬ್ಬರು ಪೊಲೀಸರ ಸಾಕ್ಷಿಗಳನ್ನು ಮಾತ್ರ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.