
ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಮೈಸೂರಿನೊಂದಿಗೆ ಅವಿನಾಭಾವ ನಂಟು ಹೊಂದಿದ್ದರು. ಆಗಾಗ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಭಕ್ತರಾಗಿದ್ದ ಅವರು, ಶ್ರೀಕ್ಷೇತ್ರದಲ್ಲಿ ಬರೋಬ್ಬರಿ ₹ 12 ಕೋಟಿ ವೆಚ್ಚದಲ್ಲಿ ಅತಿಥಿಗೃಹವನ್ನು ನಿರ್ಮಿಸಿಕೊಟ್ಟು ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
ಇದನ್ನು 2024ರ ಫೆಬ್ರುವರಿ 11ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದರು.
ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿಕೊಟ್ಟಿದ್ದಾರೆ. ಒಟ್ಟು 4 ಮಹಡಿಗಳ ಈ ಅತಿಥಿಗೃಹವು 50 ಕೊಠಡಿಗಳನ್ನು ಹೊಂದಿದ್ದು, 700 ಜನರಿಗೆ ವಸತಿ ಸೌಲಭ್ಯ ಕಲ್ಪಿಸಬಹುದಾಗಿದೆ. ಸುತ್ತೂರು ಶ್ರೀಕ್ಷೇತ್ರವು ಈ ಭಾಗದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವೂ ಆಗಿದೆ. ಇಲ್ಲಿಗೆ ನಿತ್ಯವೂ ನೂರಾರು ಮಂದಿ ಬರುತ್ತಾರೆ. ರಾಜ್ಯ, ಹೊರ ರಾಜ್ಯಗಳಿಂದಲೂ ಬರುವ ಭಕ್ತರು ತಂಗುವುದಕ್ಕೆ ಅನುಕೂಲ ಆಗಲೆಂದು ಶಾಮನೂರು ಅತಿಥಿಗೃಹವನ್ನು ಕಟ್ಟಿಸಿಕೊಟ್ಟಿದ್ದಾರೆ.
ಇದರಿಂದಾಗಿ, ಭಕ್ತರ ವಾಸ್ತವ್ಯಕ್ಕೆ ಎದುರಾಗುತ್ತಿದ್ದ ಕೊರತೆಯೊಂದು ನೀಗಿದಂತಾಗಿದೆ. ಅದರಲ್ಲೂ ಪ್ರತಿ ವರ್ಷ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಶ್ರೀಕ್ಷೇತ್ರದಲ್ಲಿ ತಂಗುತ್ತಾರೆ.
ಈ ಅತಿಥಿಗೃಹದ ಉದ್ಘಾಟನೆ ಅಂಗವಾಗಿ ಅದೇ ವರ್ಷದ ಆ.11ರಂದು ನಡೆದಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಕುಟುಂಬದವರೊಂದಿಗೆ ಪಾಲ್ಗೊಂಡಿದ್ದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ್ದ ಅವರು, ‘ಸೇವೆಗಾಗಿ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ನೀಡುವ ಕೊಡುಗೆಯೇ ದಾನ. ಈ ರೀತಿಯಾಗಿ ಮಾಡಿದ ದಾನ ಸಮಾಜದ ಅಭ್ಯುದಯಕ್ಕೆ ನೆರವಾಗಬೇಕು ಎಂಬ ಆಶಯದಿಂದ ಮಠ–ಮಾನ್ಯಗಳಿಗೆ, ಸಂಘ-ಸಂಸ್ಥೆಗಳಿಗೆ ಕೈಲಾದ ನೆರವು ನೀಡುತ್ತಿದ್ದೇನೆ. ಸುತ್ತೂರು ಮಠದ ಅನುಪಮ ಸೇವೆಗೆ ಕೈ ಜೋಡಿಸುವುದೇ ನಮ್ಮಂಥವರ ಭಾಗ್ಯ’ ಎಂದು ಹೇಳಿದ್ದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸೇವಾ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
‘ಶಾಮನೂರು ಶಿವಶಂಕರಪ್ಪ ಅವರು ಸರ್ಕಾರ ಮತ್ತು ಅವರ ಪಕ್ಷದಿಂದ ಪಡೆದದ್ದಕ್ಕಿಂತ ವಾಪಸ್ ಕೊಟ್ಟಿರುವುದೇ ಹೆಚ್ಚು. ಸಂಕಷ್ಟದ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದರು. ಅವರೇ ಒಂದು ಶಕ್ತಿ. ಅವರು ಬಯಸಿದ್ದರೆ, ಇನ್ನೂ ದೊಡ್ಡ ಹುದ್ದೆ ಅಲಂಕರಿಸಬಹುದಿತ್ತು. ಆದರೆ, ಅವರದ್ದು ನಿರ್ಲಿಪ್ತ ಭಾವವಾದ್ದರಿಂದ ಇದ್ದಿದ್ದರಲ್ಲೇ ಖುಷಿ ಪಟ್ಟರು’ ಎಂದು ಸುತ್ತೂರು ಸ್ವಾಮೀಜಿ ಶ್ಲಾಘಿಸಿದ್ದಾರೆ.
‘ಅವರ ಇಂತಹ ಉದಾರ ಮನೋಭಾವಕ್ಕೆ ಸಾಕ್ಷಿ ಎಂಬಂತೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಅತಿಥಿ ಗೃಹ ನಿರ್ಮಾಣವಾಗಿದೆ. ಭಗವಂತ ಕೊಟ್ಟಿದ್ದನ್ನು ಸಮಾಜದ ಅಭಿವೃದ್ಧಿಗಾಗಿ ಹೇಗೆ ವಿನಿಯೋಗಿಸಬೇಕು ಎಂಬುದಕ್ಕೆ ಅವರು ಮಾದರಿ ಆಗಿ ಬಾಳಿದವರು’ ಎಂದು ನೆನೆದಿದ್ದಾರೆ.
ಶಾಮನೂರು ಅವರು ವಯೋಸಹಜ ಅಸೌಖ್ಯದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಬಂದಿರಲಿಲ್ಲ.
ನಂಜನಗೂಡು ತಾಲ್ಲೂಕಿನ ಕ್ಷೇತ್ರ ಹೋದ ವರ್ಷ ಉದ್ಘಾಟನೆ ನೆರವೇರಿತ್ತು ಪೂಜಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.