ADVERTISEMENT

ಆಟ ನಿಲ್ಲಿಸಿತು ಮೈಸೂರಿನ ಶಾಂತಲ ಥಿಯೇಟರ್‌

1974ರಲ್ಲಿ ಎನ್‌ಎಸ್‌ ರಸ್ತೆಯಲ್ಲಿ ಆರಂಭವಾದ ಚಿತ್ರಮಂದಿರ ಇನ್ನು ನೆನಪು ಮಾತ್ರ

ರಮೇಶ ಕೆ
Published 23 ಜೂನ್ 2020, 3:14 IST
Last Updated 23 ಜೂನ್ 2020, 3:14 IST
ಮುಚ್ಚುವ ಹಂತದಲ್ಲಿರುವ ಮೈಸೂರಿನ ಪ್ರತಿಷ್ಠಿತ ಶಾಂತಲಾ ಚಿತ್ರಮಂದಿರ (ಎಡಚಿತ್ರ). ಚಿತ್ರಮಂದಿರದ ಮಾಲೀಕ ಪದ್ಮನಾಭ ಪದಕಿ (ಬಲಗಡೆ ಕುಳಿತವರು) ಮತ್ತು ವ್ಯವಸ್ಥಾಪಕ ದೇವರಾಜು ಅವರನ್ನು ಪಾತಿ ಫೌಂಡೇಶನ್ ವತಿಯಿಂದ ಚಿತ್ರಮಂದಿರದ ಮುಂಭಾಗ ಸೋಮವಾರ ಸನ್ಮಾನಿಸಲಾಯಿತು   
ಮುಚ್ಚುವ ಹಂತದಲ್ಲಿರುವ ಮೈಸೂರಿನ ಪ್ರತಿಷ್ಠಿತ ಶಾಂತಲಾ ಚಿತ್ರಮಂದಿರ (ಎಡಚಿತ್ರ). ಚಿತ್ರಮಂದಿರದ ಮಾಲೀಕ ಪದ್ಮನಾಭ ಪದಕಿ (ಬಲಗಡೆ ಕುಳಿತವರು) ಮತ್ತು ವ್ಯವಸ್ಥಾಪಕ ದೇವರಾಜು ಅವರನ್ನು ಪಾತಿ ಫೌಂಡೇಶನ್ ವತಿಯಿಂದ ಚಿತ್ರಮಂದಿರದ ಮುಂಭಾಗ ಸೋಮವಾರ ಸನ್ಮಾನಿಸಲಾಯಿತು      

ಮೈಸೂರು: ‘ರಾಜಕುಮಾರ್‌ ನಟನೆಯ ‘ಶಬ್ದವೇದಿ’ ಸಿನಿಮಾದ ಮೊದಲ ಷೋ ನೋಡಲು ರಾತ್ರಿ ಎರಡು ಗಂಟೆಯಿಂದಲೇ ಶಾಂತಲ ಟಾಕೀಸ್‌ ಮುಂದೆ ಕಾದು ಕುಳಿತಿದ್ದೆ. ಆಗ ಒಬ್ಬರಿಗೆ ಒಂದೊಂದೇ ಟಿಕೆಟ್‌ ಕೊಡುತ್ತಿದ್ದರು. ‘ಅಣ್ಣಾವ್ರ’ ಯಾವುದೇ ಸಿನಿಮಾ ರಿಲೀಸ್‌ ಆದರೂ ಮೊದಲ ಷೋ ನೋಡುತ್ತಿದ್ದೆ. ಶಿವರಾಜ ಕುಮಾರ್‌ ಅಭಿನಯದ ‘ಟಗರು’ ಸಿನಿಮಾಕ್ಕೂ ನೂಕುನುಗ್ಗಲಿನಲ್ಲೇ ಟಿಕೆಟ್‌ ತೆಗೆದುಕೊಂಡು ಸಿನಿಮಾ ನೋಡಿದೆ....’

ಪ್ರಮುಖ ನಟರ ಚಿತ್ರಗಳನ್ನು ಮಿಸ್‌ ಮಾಡದೇ ನೋಡುತ್ತಿದ್ದ ಗುರುನಂದನ್‌ ಅವರು ಶಾಂತಲ ಥಿಯೇಟರ್‌ನೊಂದಿಗಿನ ನೆನಪುಗಳನ್ನು ಬಿಚ್ಚಿಟ್ಟ ಪರಿಯಿದು.

ಅನಾಥಾಲಯ ಜಾಗವನ್ನು 1972ರಲ್ಲಿ ಭೋಗ್ಯಕ್ಕೆ ಪಡೆದ ಪದ್ಮನಾಭ ಪದಕಿ ಹಾಗೂ ಟಿ.ಪಿ.ಸುಬ್ಬರಾವ್‌ ಅವರು 1974ರಲ್ಲಿ ನಾರಾಯಣ ಶಾಸ್ತ್ರೀ ರಸ್ತೆಯ ‍ಪಕ್ಕದಲ್ಲಿ ಥಿಯೇಟರ್‌ ಆರಂಭಿಸಿದರು. ಮೊದಲ ಚಿತ್ರವೇ (ಬಂಗಾರದ ಪಂಜರ) ನೂರು ದಿನ ಪ್ರದರ್ಶನಗೊಂಡಿರುವುದು ಚಿತ್ರಮಂದಿರದ ಹೆಗ್ಗಳಿಕೆ. ಶೇಕಡಾ 95ರಷ್ಟು ಕನ್ನಡ ಸಿನಿಮಾಗಳೇ ಇಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಕುಟುಂಬ ಸಮೇತ ಬಂದು ಸಿನಿಮಾ ವೀಕ್ಷಿಸುತ್ತಿದ್ದರು. ಈಗ ಚಿತ್ರಮಂದಿರ ಮುಚ್ಚಲಾಗುತ್ತಿದೆ ಎಂಬ ಸುದ್ದಿ ನಗರ ಹಾಗೂ ಜಿಲ್ಲೆಯ ಸಿನಿಪ್ರಿಯರಲ್ಲಿ ಬೇಸರಕ್ಕೆ ಕಾರಣವಾಗಿದೆ.

ADVERTISEMENT

ಥಿಯೇಟರ್ ಮುಚ್ಚಲು ಮುಖ್ಯ ಕಾರಣ ಏನೆಂಬುದನ್ನು ಮಾಲೀಕರಲ್ಲಿ ಒಬ್ಬರಾದ ಪದ್ಮನಾಭ ಪದಕಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಅನಾಥಾಲಯದಿಂದ ಜಾಗ ವನ್ನುಭೋಗ್ಯಕ್ಕೆ ಪಡೆದ ಅವಧಿ ಮುಗಿದಿದೆ.ಜಾಗ ಬಿಟ್ಟುಕೊಡಿ ಎಂದು ಸಮಿತಿಯವರು ಕೇಳಿಕೊಂಡಿದ್ದರಿಂದ ಅನಿವಾರ್ಯವಾಗಿ ಮುಚ್ಚಲಾಗುತ್ತಿದೆಯೇ ಹೊರತು ಕೋವಿಡ್‌ ಸಂಕಷ್ಟದಿಂದ ಅಲ್ಲ. 1974 ರಿಂದಲೂ ಚಿತ್ರಮಂದಿರ ಚೆನ್ನಾಗಿಯೇ ನಡೆಯುತ್ತಿದೆ. ನಾವೇ ಕಟ್ಟಿ ಬೆಳೆಸಿದ್ದೇವೆ. ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯೂ ಇರಲಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘34 ವರ್ಷಗಳಿಂದ ಗೇಟ್‌ ಕೀಪರ್‌ ಕೆಲಸ ಮಾಡುತ್ತಿದ್ದೇನೆ. ‘ಗಾಂಧಿ ಕ್ಲಾಸ್‌’ಗೆ ಆಗ 95 ಪೈಸೆ ಇತ್ತು. ಆರಂಭದಲ್ಲಿ ನನ್ನ ಸಂಬಳ ₹120 ಇತ್ತು. ಯಾವತ್ತೂ ಸಂಬಳಕ್ಕೆ ತೊಂದರೆ ಆಗಿಲ್ಲ. ಚೆನ್ನಾಗಿ ನೋಡಿಕೊಂಡಿದ್ದಾರೆ. ಏಕಾಏಕಿ ಚಿತ್ರಮಂದಿರ ಮುಚ್ಚುತ್ತಿರುವುದರಿಂದ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ದೇವದಾಸ್‌ ಆತಂಕ ವ್ಯಕ್ತಪಡಿಸಿದರು.

‘ನಮ್ಮ ಚಿತ್ರಮಂದಿರದಲ್ಲಿ ಬ್ಲಾಕ್‌ ಟಿಕೆಟ್‌ ಮಾರಲು ಅವಕಾಶ ಇರಲಿಲ್ಲ. ರಾಜಕುಮಾರ್‌, ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್, ವಿಷ್ಣುವರ್ಧನ್‌ ಚಿತ್ರಗಳು ತೆರೆಕಂಡಾಗ ಹೆಚ್ಚುವರಿ ಷೋಗಳನ್ನು ಮಾಡಿದ್ದೇವೆ. ಜನರೇ ಕ್ಯೂನಲ್ಲಿ ಟಿಕೆಟ್‌ ಪಡೆದು ಸಭ್ಯತೆಯಿಂದ ವರ್ತಿಸುತ್ತಿದ್ದರು. ಚೆನ್ನಾಗಿ ನಡೆಯುವ ವೇಳೆಯಲ್ಲಿ ಮುಚ್ಚುವ ಸ್ಥಿತಿ ಬಂದಿರುವುದು ಬೇಸರ ತಂದಿದೆ. ಈಗಲೂ ಚಿತ್ರಮಂದಿರ ಉತ್ತಮವಾಗಿ ನಡೆಸಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಕ್ಯಾಷಿಯರ್‌
ವೆಂಕಟೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.