ADVERTISEMENT

ಯುವನಿಧಿ ಭತ್ಯೆ ಪಡೆಯುವ ಉತ್ಸಾಹ, ತರಬೇತಿಗಿಲ್ಲ: ಸಚಿವ ಶರಣಪ್ರಕಾಶ ಪಾಟೀಲ ಬೇಸರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 8:25 IST
Last Updated 14 ಅಕ್ಟೋಬರ್ 2025, 8:25 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಮೈಸೂರು: ‘ಯುವನಿಧಿ ಯೋಜನೆಗೆ ರಾಜ್ಯದ 2.77 ಲಕ್ಷ ಜನ ನೋಂದಾಯಿಸಿಕೊಂಡಿದ್ದರೂ ಕೌಶಲ ತರಬೇತಿಗೆ ಮಾತ್ರ 1500 ಮಂದಿ ಹಾಜರಾಗಿದ್ದಾರೆ. ಹಣ ಪಡೆಯುವವರೆಲ್ಲ ತರಬೇತಿಗೆ ಬರುತ್ತಿಲ್ಲ’ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ವಿಷಾದಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ‘ ಕೌಶಲ ತರಬೇತಿ ಪಡೆದರೆ ಸರ್ಕಾರವು ಪದವೀಧರರಿಗೆ ನೀಡುವ ಹಣ ಯುವನಿಧಿ ಹಣ ಬಂದ್‌ ಆಗುತ್ತದೆ ಎಂಬ ತಪ್ಪುಕಲ್ಪನೆ ಬಹುತೇಕರಲ್ಲಿ ಇದೆ. ಈ ಬಗ್ಗೆ ಯಾರೂ ಆತಂಕ ಪಡೆಬೇಕಾದ ಅಗತ್ಯ ಇಲ್ಲ. ನೋಂದಣಿ ಆದವರಿಗೆ ಮುಂದಿನ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೂ ಹಣ ಸಿಗಲಿದೆ’ ಎಂದು ಸ್ಪಷ್ಟನೆ ನೀಡಿದರು.

‘ರಾಜ್ಯ ಸರ್ಕಾರ ಯುವನಿಧಿ ಪ್ಲಸ್ ಯೋಜನೆ ಜಾರಿಗೆ ಬಂದಿದ್ದು, ಈ ವರ್ಷ 25 ಸಾವಿರ ಜನರಿಗೆ ಕೌಶಲ ತರಬೇತಿ ಗುರಿ ಇದೆ. ರಾಜ್ಯದ ಕಲಬುರಗಿ, ಕೊಪ್ಪಳ ಹಾಗೂ ಮೈಸೂರು ಜಿಲ್ಲೆಯ ವರುಣದಲ್ಲಿ ಬಹುಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

ADVERTISEMENT

ಪಿಪಿಪಿ ಮಾದರಿ:

‘ರಾಜ್ಯದಲ್ಲಿ ಪಿಪಿಪಿ ಮಾದರಿಯಲ್ಲಿ 6 ಹೊಸ ಮೆಡಿಕಲ್‌ ಕಾಲೇಜುಗಳನ್ನು ಸರ್ಕಾರ ಸ್ಥಾಪಿಸಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆದ ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

‘ಪ್ರಸ್ತುತ ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್‌ ಕಾಲೇಜುಗಳಿದ್ದು, 3900 ಮೆರಿಟ್ ಸೀಟುಗಳು ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿಯೂ ರಾಜ್ಯ ಕೋಟಾ ಅಡಿಯಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು, ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟು ಸಿಗಲಿವೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.