
ಸರಗೂರು: ‘ಛತ್ರಪತಿ ಶಿವಾಜಿ ಸೇನೆಯಲ್ಲಿ ವಿವಿಧ ಧರ್ಮದವರಿಗೆ ಅವಕಾಶ ಕಲ್ಪಿಸಿದ್ದರು. ಮಸೀದಿ ಮತ್ತು ದರ್ಗಾಗಳನ್ನು ರಕ್ಷಿಸುವ ಆದೇಶ ನೀಡಿದ್ದು, ಅವರ ಧಾರ್ಮಿಕ ಸಹಿಷ್ಣುತೆಗೆ ಸಾಕ್ಷಿ’ ಎಂದು ಸರಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಲಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ನಡೆದ ಕ್ಷೇತ್ರಪತಿ ಶಿವಾಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಅಧಿಕಾರವು ಜನರ ಸೇವೆಯಾಗಿ ರೂಪಾಂತರಗೊಳ್ಳಬೇಕು ಎಂಬ ಸಂದೇಶವನ್ನು ಅವರು ತಮ್ಮ ಆಡಳಿತದ ಮೂಲಕ ತೋರಿಸಿದರು’ ಎಂದರು.
‘ಪ್ರಜೆಗಳ ಹಿತಕ್ಕಾಗಿ ಅಷ್ಟ ಪ್ರಧಾನ ಮಂಡಲಿಯನ್ನು ರಚಿಸಿ ಸುಸಂಘಟಿತ ಆಡಳಿತ ವ್ಯವಸ್ಥೆ ನಡೆಸಿದರು. ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಕೇಂದ್ರಿತ ಆಡಳಿತವನ್ನು ಬಲಪಡಿಸಲು ಶಿವಾಜಿ ಅವರ ಚಿಂತನೆಗಳು ಮಾರ್ಗದರ್ಶನವಾಗಿವೆ’ ಎಂದು ಹೇಳಿದರು.
‘ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಉದ್ರೇಕ ಉಂಟುಮಾಡುವ ಇಂದಿನ ಸಂದರ್ಭದಲ್ಲಿ ಶಿವಾಜಿ ಅವರ ಧಾರ್ಮಿಕ ಸೌಹಾರ್ದ ದಾರಿಯೇ ಸಮಾನತೆ ಮತ್ತು ಶಾಂತಿಯ ಮೂಲವಾಗಿದೆ’ ಎಂದು ಹೇಳಿದರು.
‘ಇಂದಿನ ಯುವಪೀಳಿಗೆ ಸವಾಲುಗಳನ್ನು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಎದುರಿಸಬೇಕು. ಶಿವಾಜಿ ಅವರ ಚಿಂತನೆಗಳು ಪುಸ್ತಕಗಳಲ್ಲಿ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದಲ್ಲೂ ಜೀವಂತವಾಗಬೇಕು, ಅವರ ಆದರ್ಶಗಳು ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ನ್ಯಾಯಸಮ್ಮತ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯತಿ ಇಒ ಮಹಾದೇವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆಂಗಡಣ್ಣಸ್ವಾಮಿ, ಮರಾಠ ಸಮಾಜದ ಮುಖಂಡರಾದ ಸುರೇಶ್, ಚಿನ್ನು, ಸುನೀಲ್, ಶ್ಯಾಮ್ ಶಿವಾಜಿ, ಅಭಿ, ಉಪ ತಹಶೀಲ್ದಾರ್ ಮನೋಹರ್, ಷರೀಫ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.