
ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ | ದಾಸೋಹ ದಿನ ಅಂಗವಾಗಿ ಮೆರವಣಿಗೆ, ಭಕ್ತರಿಗೆ ಪ್ರಸಾದ ವಿತರಣೆ
ಮೈಸೂರು: ತ್ರಿವಿಧ ದಾಸೋಹಿ, ಸಿದ್ಧಗಂಗ ಮಠದ ಶಿವಕುಮಾರ ಶ್ರೀಗಳ ಏಳನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದ ಅಂಗವಾಗಿ ನಗರದ ವಿವಿಧೆಡೆ ಬುಧವಾರ ಕಾರ್ಯಕ್ರಮಗಳು ನಡೆದವು. ಅನ್ನ ಸಂತರ್ಪಣೆ ಮೊದಲಾದ ಚಟುವಟಿಕೆಗಳ ಮೂಲಕ ಶ್ರೀಗಳ ಸೇವೆ ನೆನೆಯಲಾಯಿತು.
ನಗರದ 101 ಗಣಪತಿ ದೇಗುಲದ ಆವರಣದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿ ಭಕ್ತಮಂಡಳಿ ವತಿಯಿಂದ ಶ್ರೀಗಳ ಸ್ಮರಣೆ ಹಾಗೂ ದಾಸೋಹ ದಿನ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು.
ಬಸವಣ್ಣ, ಗುರುಮಲ್ಲೇಶ್ವರರು, ಶಿವಕುಮಾರ ಸ್ವಾಮೀಜಿ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರ ಇರುವ ಮೆರವಣಿಗೆ ಅಗ್ರಹಾರ ವೃತ್ತದಿಂದ ಪ್ರಾರಂಭವಾಗಿ ತ್ಯಾಗರಾಜ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಬಳಿಯಿರುವ ಬಸವ ಪುತ್ಥಳಿ, ರಾಮಾನುಜ ರಸ್ತೆಯ ಮೂಲಕ ಸಾಗಿ 101 ಗಣಪತಿ ದೇವಸ್ಥಾನದ ಬಳಿ ಅಂತ್ಯವಾಯಿತು. ನಂದಿಕಂಬ, ವೀರಗಾಸೆ, ಪೂಜಾಕುಣಿತ, ಡೊಳ್ಳುಕುಣಿತ, ಪಟದ ಕುಣಿತ, ಭಜನೆ, ವಾದ್ಯಗೋಷ್ಠಿ ಮೊದಲಾದ ಕಲಾತಂಡಗಳು ಸಾಥ್ ನೀಡಿದವು.
ಇದೇ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕುದೇರು ಮಠದ ಗುರುಶಾಂತ ಸ್ವಾಮೀಜಿ, ದೇವಲಾಪುರ ಮಠದ ಜಡೆ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ಸಮಿತಿಯ ಮುಖಂಡ ಎಂ. ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ವಸಂತಕುಮಾರ್, ಪ್ರದೀಪ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಚಾಮುಂಡಿಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬಳಗದ ಅಧ್ಯಕ್ಷ ಸಂದೀಪ್ ಚಂದ್ರಶೇಖರ್ ಮಾತನಾಡಿ, ‘ಸಿದ್ಧಗಂಗ ಶ್ರೀಗಳ ಬದುಕು ನಮಗೆಲ್ಲರಿಗೂ ದಾರಿದೀಪ. ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕಾದ ಅವರ ಸಾಮಾಜಿಕ ಕಳಕಳಿ ಸಮಾಜಕ್ಕೆ ಎಂದೆಂದಿಗೂ ಆದರ್ಶ’ ಎಂದು ಸ್ಮರಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು. ಉದ್ಯಮಿ ಅಮರನಾಥ್ ರಾಜೇ ಅರಸ್, ಮುಖಂಡರಾದ ನಾಗರಾಜ್, ಜೋಗಿ ಮಂಜು, ಸೋಮಸುಂದರ್, ವಿದ್ಯಾ ಅರಸ್, ಜಗದೀಶ್ ಲಿಂಗಣ್ಣ, ಜೀವಧಾರ ಗಿರೀಶ್, ಬಸವಣ್ಣ, ಕೆ.ಆರ್.ಬ್ಯಾಂಕ್ ಬಸಪ್ಪ, ಸೌಭಾಗ್ಯ ಮೂರ್ತಿ, ಮಂಜುಳಾ, ವಿಜಯಾ, ಪ್ರಕಾಶ್, ಮೋಹನ್, ಬಸವರಾಜ್, ಪ್ರಭು, ಸುರೇಶ್, ಮಹೇಶ್ ಅರಸ್, ಮರಿಸ್ವಾಮಿ ಭಾಗವಹಿಸಿದ್ದರು.
ಶಿವಕುಮಾರ ಶ್ರೀ ವೃತ್ತ: ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಭಕ್ತವೃಂದದಿಂದ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಮುಖಂಡರಾದ ಜಗದೀಶ್, ದೀಪು, ಕೆ.ಆರ್, ರಜನೀಶ್, ತ್ರಿಶೂಲ್, ಗಿರೀಶ್, ರಾಜು, ವಿನಯ್ ಕುಮಾರ್, ಕಡಕೋಳ ಜಗದೀಶ್, ಎಸ್.ಎನ್.ರಾಜೇಶ್, ದೂರ ರಾಜಣ್ಣ, ಸತ್ಯಾನಂದ ವಿಟ್ಟು, ರಾಕೇಶ್, ಬಸವರಾಜ್, ಅಭಿಲಾಷ್ ಪಾಲ್ಗೊಂಡರು.