ADVERTISEMENT

ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಜಾನಪದ ಕಲಾತಂಡಗಳ ಮೆರಗು l ಭಕ್ತರ ಜಯಘೋಷ

ಮೋಹನ್ ಕುಮಾರ ಸಿ.
Published 29 ಜನವರಿ 2025, 5:17 IST
Last Updated 29 ಜನವರಿ 2025, 5:17 IST
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು   

ಸುತ್ತೂರು (ಮೈಸೂರು ಜಿಲ್ಲೆ): ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಗುರುವಾರ ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು‌.

ಜಾತ್ರಾ ಮಹೋತ್ಸವ ಪ್ರಯುಕ್ತ ನಾಡಿನ ವಿವಿಧೆಡೆಯಿಂದ ಬಂದಿದ್ದ ಭಕ್ತರು, ಗ್ರಾಮದ ಕರ್ತೃ ಗದ್ದುಗೆ ಆವರಣದಲ್ಲಿ ಬೃಹತ್ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ‌ ತೀರಿಸಿದರು. ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು.

ಬೆಳಿಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6 ಗಂಟೆಗೆ ಮಠದ ಗುರು ಪರಂ‍ಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. 10.30 ಕ್ಕೆ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಅರ್ಚಕರು ಪೂಜೆ ‌ಪೂರೈಸಿದರು.

ADVERTISEMENT

ಬೆಳಿಗ್ಗೆ 10.55ಕ್ಕೆ ಗೋವಾ ರಾಜ್ಯಪಾಲ ಶ್ರೀಧರ್ ಪಿಳ್ಳೈ, ಸಚಿವ ಮಂಕಾಳ ಎಸ್. ವೈದ್ಯ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ಮುಖಂಡರಾದ ಮುರುಗೇಶ್ ನಿರಾಣಿ, ಜೆ.ಸಿ.ಮಾಧುಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಮಿಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ 21 ಕುಶಾಲತೋಪುಗಳು ಸಿಡಿದವು. ಭಕ್ತರ ಜಯಘೋಷ ಮುಗಿಲುಮುಟ್ಟಿತು.

ಭಕ್ತರು ಮಠದ ಗುರು ಪರಂಪರೆಗೆ ಜಯಕಾರ ಹಾಕುತ್ತಾ ರಥವನ್ನು ಎಳೆಯುತ್ತಿದ್ದರೆ ಪುಷ್ಪಾಲಂಕೃತ ರಥವು ರಾಜಠೀವಿಯಲ್ಲಿ ಸಾಗಿತು. ಜಾನಪದ ಕಲಾತಂಡಗಳು ಆಕರ್ಷಿಸಿದವು. ತಮಟೆ, ನಗಾರಿ ವಾದ್ಯಗಳ ನಾದವು ಮುಗಿಲುಮುಟ್ಟಿತು. ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ಕೈ ಮುಗಿಯಿತು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕರ್ತೃ ಗದ್ದುಗೆಗೆ ಮರಳಿತು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು

‘ಜನರನ್ನು ಒಗ್ಗೂಡಿಸುವ ಜಾತ್ರೆ’

‘ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸುತ್ತೂರು ಜಾತ್ರೆಯೂ ಜಾತ್ಯತೀತವಾಗಿ ಜನರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಕತೃ ಗದ್ದುಗೆ ಆವರಣದ ವೇದಿಕೆಯಲ್ಲಿ ಮಂಗಳವಾರ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ‘ಬಸವಣ್ಣ, ಶಿವರಾತ್ರೀಶ್ವರ ಶಿವಯೋಗಿಗಳ ಪರಂಪರೆಯನ್ನು ಮುಂದುವರಿಸಿರುವ ಮಠವು ಜ್ಞಾನ, ಅನ್ನ ದಾಸೋಹದ ಜೊತೆ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಸಾಮರಸ್ಯದಿಂದ ಬದುಕಬೇಕೆಂದು ಸಾರುತ್ತಿದೆ’ ಎಂದು ಶ್ಲಾಘಿಸಿದರು.

ಶಾಸಕ ಜಿ.ಟಿ.ದೇವೇಗೌಡ, ‘ಕಾಣೆಯಾಗುತ್ತಿರುವ ಪೌರಾಣಿಕ ನಾಟಕ, ಕುಸ್ತಿ, ದನಗಳ ಜಾತ್ರೆ, ದೇಸಿ ಆಟಗಳನ್ನು ಆಯೋಜಿಸಿ ನೆಲದ ಸಂಸ್ಕೃತಿಯನ್ನು ಜೀವಂತವಾಗಿ ಸುತ್ತೂರು ಜಾತ್ರೆಯು ಉಳಿಸುತ್ತಿದೆ’ ಎಂದರು. ಲೇಖಕ ಪ್ರಸನ್ನಮೂರ್ತಿ ಗುರುವಿನಪುರ ಅವರ ‘ನಮ್ಮ ಕಾಡಿನ ಕಥೆಗಳು’, ‘ಕಪಿಲೆ’ ಕಥಾ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ತನ್ವೀರ್‌ ಸೇಠ್, ಭರತನಾಟ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ, ಡಾ.ಎಂ.ಎಸ್.ರವೀಂದ್ರ, ಮುಪ್ಪಿನ ಬಸವಲಿಂಗ ಸ್ವಾಮೀಜಿ, ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ಉದ್ಯಮಿಗಳಾದ ದಿಲೀಪ್ ಪಾರ್ಥಸಾರಥಿ, ಎಚ್.ಎಸ್. ರಾಘವೇಂದ್ರರಾವ್, ನಿಶಾಂತ್, ಬಾಬು ಕಿಲಾರ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

ಜಾತ್ರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. ಕತೃ ಗದ್ದುಗೆ ಆವರಣದಲ್ಲಿ ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆಯ ಮಂಟೇಸ್ವಾಮಿ ನೀಲಗಾರರ ಕಲಾಸಂಘದ ಕಲಾವಿದರು ‘ನೀಲಗಾರರ ಪದ’ ಹಾಡಿದರು.

ಚಿಕ್ಕಮಗಳೂರಿನ ಗಾನಸಿಂಚನ ಕಲಾತಂಡದ ಜನಪದ ಗೀತೆ, ವಿದುಷಿ ಪಾವನಿ ಭಾರದ್ವಾಜ್‌ ಅವರ ‘ಭಕ್ತಿ ಸಂಗೀತ, ವೈಷ್ಣವಿ ಅವರ ‘ಕಥಕ್‌ ನೃತ್ಯ’, ಸ್ನೇಹ ಮಹಿಳಾ ವೀರಗಾಸೆ ತಂಡದ ‘ಮೋಹಿನಿ ಭಸ್ಮಾಸುರ’ ಯಕ್ಷಗಾನ, ಶಿಲ್ಪಾರಾಣಿ ಅಮಿತ್‌ ಮತ್ತು ತಂಡದ ‘ಯೋಗ ನೃತ್ಯರೂಪಕ’ ಗಮನ ಸೆಳೆಯಿತು.

ಜಿ.ಗುರುರಾಜ್ ಅವರು ‘ಮಲೆಮಹದೇಶ್ವರ ಕಥನ’ ಪ್ರಸ್ತುತಪಡಿಸಿದರು. ಸಾತ್ವಿಕ ಕಲಾ ತಂಡದವರು ‘ಮಾದಾರ ಚೆನ್ನಯ್ಯ’ ನಾಟಕ ಅಭಿನಯಿಸಿದರು.

ಹಿರಿಯರ ಮನೆ ಆವರಣದಲ್ಲಿ ಮೈಸೂರಿನ ಆಲನಹಳ್ಳಿಯ ನಾದಸಂಗಮ ಕಲಾತಂಡದವರು ‘ಭಕ್ತ ಪ್ರಹ್ಲಾದ’, ಸಿದ್ಧನಂಜ ದೇಶಿಕೇಂದ್ರ ಮಂಗಳ ಮಂಟಪದ ಮುಂಭಾಗ ಮೇಟಗಳ್ಳಿಯ ಚಾಮುಂಡೇಶ್ವರಿ ಸೇವಾ ಸಮಿತಿಯವರು ‘ದಕ್ಷಯಜ್ಞ’ ನಾಟಕ ಪ್ರದರ್ಶಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತುಮ್ಮನೇರಳೆಯ ನಾಗೇಶ್ವರ ಸ್ವಾಮಿ ಕಲಾತಂಡದವರು ‘ದಕ್ಷಯಜ್ಞ’ ನಾಟಕ, ಘನಲಿಂಗ ಶಿವಯೋಗಿ ಅತಿಥಿಗೃಹದ ಹಿಂಭಾಗದ ವೇದಿಕೆಯಲ್ಲಿ ಕನಕಪುರ ತಾಲ್ಲೂಕಿನ ಗಾಣಾಳುದೊಡ್ಡಿಯ ಅರ್ಧನಾರೀಶ್ವರ ಕಲಾ ಅಭಿವೃದ್ಧಿ ಟ್ರಸ್ಟ್ ಕಲಾವಿದರು ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.