ADVERTISEMENT

ಪೇಜಾವರ ಶ್ರೀಗಳ ಚಾತುರ್ಮಾಸ್ಯ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:22 IST
Last Updated 24 ಜುಲೈ 2019, 19:22 IST

ಮೈಸೂರು: ಪೇಜಾವರ ಶ್ರೀಗಳ 81ನೇ ಮತ್ತು ವಿಶ್ವಪ್ರಸನ್ನತೀರ್ಥರ 32ನೇ ಚಾತುರ್ಮಾಸ್ಯ ಸಮಾರಂಭವನ್ನು ಜು.26ರಿಂದ ಸೆ.14ರವರೆಗೆ ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಆಯೋಜಿಸಲಾಗಿದೆ ಎಂದು ಚಾತುರ್ಮಾಸ್ಯ ಆಡಳಿತ ಸಮಿತಿಯ ಅಧ್ಯಕ್ಷ ಆರ್‌.ವಾಸುದೇವ ಭಟ್‌ ಹೇಳಿದರು.

ಜುಲೈ 26ರಂದು ಸಂಜೆ 4 ಗಂಟೆಗೆ ಅಗ್ನಿಶಾಮಕ ಕಚೇರಿಯಿಂದ ವಿರಾಟ್ ಶೋಭಾಯಾತ್ರೆ ನಡೆಯಲಿದೆ. ಸಂಜೆ 6 ಗಂಟೆಗೆ ಪೇಜಾವರ ಶ್ರೀ ಹಾಗೂ ವಿಶ್ವಪ್ರಸನ್ನತೀರ್ಥ ಅವರಿಗೆ ಸ್ವಾಗತ ಸಮಾರಂಭ ನಡೆಯುತ್ತದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಾತುರ್ಮಾಸ್ಯ ನಡೆಯುವಷ್ಟು ದಿನವೂ ಸಂಜೆ 5 ಗಂಟೆಗೆ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಪ್ರವಚನ, ವಿದ್ವತ್‌ ಗೋಷ್ಠಿ, ಮಹಿಳಾ ಗೋಷ್ಠಿಗಳು ಕಲಾರಸಿಕರಿಗೆ ಉಪಯುಕ್ತವಾಗುವಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಜಯರಾಮ ಭಟ್ಟ ಹೇಳಿದರು.

ADVERTISEMENT

ಕಾರ್ಯಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ‘ಈ ಚಾತುರ್ಮಾಸ್ಯದ ನಿಮಿತ್ತ ಉಚಿತ ವೈದ್ಯಕೀಯ ತಪಾಸಣೆ, ಪ್ರತಿದಿನ 50 ರಿಂದ 60ಜನರಿಗೆ ಕಣ್ಣು ತಪಾಸಣೆ, ದಂತ ಚಿಕಿತ್ಸೆಯನ್ನು ನೀಡಲಾಗುವುದು. ಕಾವೇರಿ, ನಾರಾಯಣ ಆಸ್ಪತ್ರೆಗಳ ಸಹಯೋಗದೊಂದಿಗೆ ಆರೋಗ್ಯ ಚಿಕಿತ್ಸೆಯನ್ನು ಹಮ್ಮಿಕೊಂಡಿದ್ದು, 20,000 ಮಕ್ಕಳಿಗೆ ಉಚಿತ ಚಿಕಿತ್ಸೆ, ರಕ್ತದಾನ ಶಿಬಿರ ಏರ್ಪಡಿಸಿ 810 ಬಾಟಲಿಗಳಷ್ಟು ರಕ್ತ ಸಂಗ್ರಹಿಸಿ ಉಚಿತವಾಗಿ ಆಸ್ಪತ್ರೆಗೆ ನೀಡಲಾಗುವುದು ಎಂದರು.

ಆಯುರ್ವೇದಿಕ ಗಿಡಗಳನ್ನು ವಿತರಿಸಲಾಗುವುದು ಹಾಗೂ ಸಸಿಗಳನ್ನು ನೆಡಲಾಗುವುದು ಎಂದರು ಹೇಳಿದರು.

ಕಾರ್ಯಾಧ್ಯಕ್ಷ ಎಂ.ಕೃಷ್ಣದಾಸ್‌ ಪುರಾಣಿಕ್‌, ಕಾರ್ಯದರ್ಶಿ ಎಚ್‌.ಬಿ.ರಮಾಕಾಂತ್‌, ಎಚ್.ವಿ.ರಾಘವೇಂದ್ರ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.