ADVERTISEMENT

ಕೇಂದ್ರದಿಂದ ರಾಜಭವನ ದುರ್ಬಳಕೆ, ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಯತ್ನ: ಸಿಎಂ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 8:07 IST
Last Updated 2 ಆಗಸ್ಟ್ 2024, 8:07 IST
   

ಮೈಸೂರು: ‘ಕೇಂದ್ರ ಸರ್ಕಾರವು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯಪಾಲರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ–ಜೆಡಿಎಸ್‌ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕೆಟ್ಟ ಸಂಪ್ರದಾಯ ಆಗಬಾರದೆಂದು ನಾನು ಸಚಿವ ಸಂಪುಟ ಸಭೆಗೆ ಹೋಗಿರಲಿಲ್ಲ. ಸಭೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಹೇಳಿದ್ದೆ. ರಾಜ್ಯಪಾಲರು ನೋಟಿಸ್ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಸಭೆ ಸಲಹೆ ನೀಡಿದೆ’ ಎಂದು ತಿಳಿಸಿದರು.

ADVERTISEMENT

‘ನನ್ನ ವಿರುದ್ಧ ದೂರು ಸಲ್ಲಿಸಿರುವ ಟಿ.ಕೆ. ಅಬ್ರಾಹಂ ಒಬ್ಬ ಬ್ಲಾಕ್‌ಮೇಲರ್‌. ಅವನ ದೂರಿನ ಮೇರೆಗೆ ಕ್ರಮ ವಹಿಸಿರುವುದು ಕಾನೂನು ಬಾಹಿರವಾಗಿದೆ. ಜುಲೈ 26ರಂದು ಬೆಳಿಗ್ಗೆ 11.30ಕ್ಕೆ ದೂರು ಕೊಟ್ಟಿದ್ದಾನೆ. ಅಂದೇ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ರಾಜ್ಯಪಾಲರ ವಿಶೇಷಾಧಿಕಾರಿ ಪ್ರಭುಶಂಕರ್‌ ರಾತ್ರಿ 10ಕ್ಕೆ ಫೋನ್ ಮಾಡಿ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದು ಅತೀಕ್‌ (ಮುಖ್ಯಮಂತ್ರಿಯವರ ಹಾಗೂ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಅವರಿಗೆ ಹೇಳಿದ್ದಾರೆ. ಈಗ ರಾತ್ರಿ ಆಗಿರುವುದರಿಂದ ತೆಗೆದುಕೊಳ್ಳಲಾಗುವುದಿಲ್ಲ ಎಂದು ನಮ್ಮ ಅಧಿಕಾರಿ ತಿಳಿಸಿದ್ದಕ್ಕೆ, ಮರು ದಿನ 2ಕ್ಕೆ ಕೊಟ್ಟಿದ್ದಾರೆ’ ಎಂದು ಹೇಳಿದರು.

‘ನಾನೊಬ್ಬ ಚುನಾಯಿತ ಸರ್ಕಾರದ ಮುಖ್ಯಮಂತ್ರಿ. ನನಗೆ ನೋಟಿಸ್ ಕೊಡುವಾಗ ಕಾನೂನನ್ನು ಸಮರ್ಪಕವಾಗಿ ನೋಡಬೇಕಿತ್ತು. ಆದರೆ, ರಾಜ್ಯಪಾಲರು ಆತುರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿಯ ಜೊಲ್ಲೆ, ಮುರುಗೇಶ ನಿರಾಣಿ ಹಾಗೂ ಜನಾರ್ಧನ ರೆಡ್ಡಿ ವಿರುದ್ಧದ ದೂರುಗಳು ವರ್ಷಗಟ್ಟಲೆಯಿಂದಲೂ ಇವೆ. ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲವೇಕೆ?’ ಎಂದು ಕೇಳಿದರು.

‘ರಾಜ್ಯಪಾಲರು ನೀಡಿರುವ ನೋಟಿಸ್ ಕಾನೂನುಬಾಹಿರವಾಗಿದೆ. ಸಂವಿಧಾನವನ್ನು ಕೊಲೆ ಮಾಡುವುದು ಹಾಗೂ ಪ್ರಜಾಪ್ರಭುತ್ವ ನಾಶಪಡಿಸುವಂಥದ್ದಾಗಿದೆ. ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ. ಆದರೂ ಅನಗತ್ಯವಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ಮಂತ್ರಿ ಪರಿಷತ್ತು. ನಾವು ಸಲಹೆ ನೀಡಿದ್ದೇವೆಯೇ, ನಮ್ಮನ್ನು ಕೇಳಿದ್ದಾರೆಯೇ? ಮುಖ್ಯ ಕಾರ್ಯದರ್ಶಿಯೂ ವಿವರವಾದ ಪತ್ರವನ್ನು ಜುಲೈ 26ರಂದು ಸಂಜೆ 6.30ಕ್ಕೆ ಬರೆದಿದ್ದಾರೆ. ಅದನ್ನೂ ರಾಜ್ಯಪಾಲರು ನೋಡಿಲ್ಲ. ತನಿಖಾ ಆಯೋಗ ರಚಿಸಿದ್ದು, ಅದರ ವರದಿ ಬರಬೇಕಲ್ಲವೇ? ವರದಿ ಕೇಳಿರುವುದನ್ನೂ ಪರಿಗಣಿಸಿಲ್ಲ’ ಎಂದು ಆರೋಪಿಸಿದರು. ‘ನನಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆದುಕೊಳ್ಳಬೇಕು’ ಎಂದರು.

‘ಎಲ್ಲ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ವಿವರಣೆ ನೀಡಿದ್ದೇನೆ. ಅವರಿಗೂ ವಸ್ತುಸ್ಥಿತಿ ಅರ್ಥವಾಗಿದೆ’ ಎಂದು ತಿಳಿಸಿದರು.

ರಾಜ್ಯಪಾಲರು ನೋಟಿಸ್‌ ಕೊಟ್ಟಿರುವುದರಿಂದ ಸಿಎಂ ಶೇಕ್ ಆಗಿದ್ದಾರೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಹೇಳಿಕೆಗೆ, ‘ನನಗ್ಯಾಕೆ ಹೆದರಿಕೆ? ಅಶೋಕ ಹೆದರಿರಬೇಕು. ರಾಜ್ಯಪಾಲರು ಕಾನೂನು ಪ್ರಕಾರವಾಗಿ ನಿರ್ವಹಿಸಿಲ್ಲ. ನಾನು ತಪ್ಪನ್ನೇ ಮಾಡಿಲ್ಲವಾದ್ದರಿಂದ ಹೆದರಿಕೆ ಇಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧವಾಗಿದ್ದೇವೆ’ ಎಂದರು.

‘ಈ ಕೇಸ್‌ನಲ್ಲಿ ಏನೂ ಇಲ್ಲವಾದ್ದರಿಂದ ಪಾದಯಾತ್ರೆ ಬೇಡ’ ಎಂದು ಕೇಂದ್ರ ಸಚಿವರೂ ಹಾಗೂ ಜೆಡಿಎಸ್ ನಾಯಕರೂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಮಳೆ, ಪ್ರವಾಹ ಇದೆ, ಆಗ ಬಗ್ಗೆ ಗಮನಕೊಡಬೇಕು ಎಂದು ಹೇಳಿದ್ದರು. ಬಳಿಕ ಅದು ಮರೆತು ಹೋಯಿತೇ?’ ಎಂದು ಲೇವಡಿ ಮಾಡಿದರು. ‘ಒಂದೇ ದಿನದಲ್ಲಿ ಬದಲಾಗಿರುವುದನ್ನು ನೋಡಿದರೆ, ಅವರು ಸ್ವಇಚ್ಛೆಯಿಂದ ಪಾದಯಾತ್ರೆ ಮಾಡುತ್ತಿಲ್ಲ ಎಂದರ್ಥವಾಯಿತಲ್ಲಾ?’ ಎಂದೂ ಟೀಕಿಸಿದರು.

‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಮನೆ ಬಿದ್ದಿರುವುದು, ರಸ್ತೆಗಳು ಹಾಳಾಗಿರುವುದು, ಸೇತುವೆಗಳು ಕುಸಿದಿರುವುದು, ವಿದ್ಯುತ್‌ ಕಂಬಗಳು ಉರುಳಿರುವ ಬಗ್ಗೆ ವರದಿ ಕೇಳಿದ್ದೇನೆ. ಮನೆ ಕಳೆದುಕೊಂಡವರಿಗೆ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ಕೊಡುವ ಜತೆಗೆ ಮನೆಯನ್ನೂ ಕಟ್ಟಿಸಿಕೊಡುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ’ ಎಂದು ತಿಳಿಸಿದರು.

ಶಾಸಕ ಎ.ಎಸ್. ಪೊನ್ನಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್‌, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಹಾಗೂ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್‌.ಮೂರ್ತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.