ADVERTISEMENT

ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಲು ಆತ್ಮಸಾಕ್ಷಿಯ ಮತ ಹಾಕುತ್ತಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 16:33 IST
Last Updated 6 ಜೂನ್ 2022, 16:33 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ 2ನೇ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಆತ್ಮಸಾಕ್ಷಿ ಮತಗಳು ದೊರೆಯಲಿವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ‌ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಜೆಡಿಎಸ್‌ನಲ್ಲಿರುವ ಅಲ್ಪಸಂಖ್ಯಾತ ಶಾಸಕರು ಬೆಂಬಲಿಸುವ ವಿಶ್ವಾಸವಿದೆ. ಗೆಲುವಿಗೆ ಬೇಕಾದಷ್ಟು ಮತಗಳು ಬರಲಿವೆ’ ಎಂದರು.

‘ಪ್ರತಿ ಬಾರಿಯೂ ಜೆಡಿಎಸ್‌ನವರೇ ಗೆಲ್ಲಬೇಕೇಕೆ? ಕೋಮುವಾದಿ ಬಿಜೆಪಿಯನ್ನು ದೂರವಿಡಲು ತನ್ನ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಿ ಜಾತ್ಯತೀತ ಕಾಂಗ್ರೆಸ್‌ ಬೆಂಬಲಿಸಲಿ. ಎಚ್.ಡಿ.ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕದೇ ಬೆಂಬಲಿಸಿದ್ದೆವು. 37 ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೆವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆನ್ನುವುದೇ ಉದ್ದೇಶವಾಗಿತ್ತು’ ಎಂದರು.

ADVERTISEMENT

‘ಮಾನ– ಮರ್ಯಾದೆ ಇಲ್ಲದ ಸಿ.ಎಂ. ಇಬ್ರಾಹಿಂ ಹೇಳಿದಂತೆ ಕೇಳುವ ಅಧ್ಯಕ್ಷರು. ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರಿದ್ದಕ್ಕೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರಾ?’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ನವರ ಟಾರ್ಚರ್ ತಡೆಯಲಾಗದೆ, ಸರ್ಕಾರ ಬಿದ್ದು ಹೋಗಲೆಂದೇ ವಿದೇಶಕ್ಕೆ ಹೋಗಿದ್ದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸಿದರು ಎಂದಿದ್ದರು. ಸರ್ಕಾರ ಬಿದ್ದಾಗಲೇ ಅದನ್ನು ಹೇಳಲಿಲ್ಲವೇಕೆ? ಆಗ ಹೇಳಿದ್ದು ಸತ್ಯವೋ, ಈಗ ಹೇಳಿದ್ದೋ? ವಿಧಾನ ಮಂಡಲ ಅಧಿವೇಶನದಲ್ಲಿ ಉತ್ತರ ಕೊಟ್ಟಾಗ ಹೇಳಿದ್ದೇ ಬೇರೆ. ಎಲ್ಲವೂ ದಾಖಲಾಗಿವೆ’ ಎಂದರು.

‘ಅಂಬೇಡ್ಕರ್‌ ಸಂವಿಧಾನಶಿಲ್ಪಿಯಲ್ಲವೇ?’
ಮೈಸೂರು:
‘ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವ ಪದವನ್ನೇ ಪಠ್ಯದಿಂದ ತೆಗೆದಿದ್ದಾರೆ. ಅವರು ಸಂವಿಧಾನ ಶಿಲ್ಪಿ ಅಲ್ಲವೇ ಎಂದು ಬಿಜೆಪಿಯವರು ಹೇಳಿಬಿಡಲಿ’ ಎಂದು ಸಿದ್ದರಾಮಯ್ಯ ಸವಾಲೆಸೆದರು.

‘ಬಿಜೆಪಿಯವರು ಅಂಬೇಡ್ಕರ್, ಕುವೆಂಪು, ಬಸವಣ್ಣ, ನಾರಾಯಣಗುರು, ಭಗತ್ ಸಿಂಗ್ ಅವರಿಗೂ ಅವಮಾನ ಮಾಡಿದ್ದಾರೆ. ದಲಿತರ ಬಗ್ಗೆ ಕಾಳಜಿ ವಹಿಸುವ ಕುರಿತು ನಮಗೆ ಹೇಳಿಕೊಡಬೇಕಿಲ್ಲ. ಸಂವಿಧಾನದ ಬಗ್ಗೆ ಬದ್ಧತೆಯುಳ್ಳ ಪಕ್ಷ ನಮ್ಮದು. ಗುತ್ತಿಗೆ, ಬಡ್ತಿಯಲ್ಲಿ ಮೀಸಲಾತಿ ನೀಡಿದವರು ನಾವು. ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟವರು ನಾವು’ ಎಂದರು.

‘ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವಿಸರ್ಜಿಸಿದರೆ ಸಾಲದು, ಅವರು ಮಾಡಿದ್ದ ಇಡೀ ಪಠ್ಯಕ್ರಮ ತಿರಸ್ಕರಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ್ದ ಪಠ್ಯವನ್ನು ಅಳವಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.