ಮುಖ್ಯಮಂತ್ರಿ ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಎಚ್.ಡಿ.ಕೋಟೆ: ‘ಸಾಧನಾ ಸಮಾವೇಶ ಸಮಾರಂಭದಲ್ಲಿ ನಾನು ಮಾತನಾಡುವಾಗ ಡಿ.ಕೆ.ಶಿವಕುಮಾರ್ ವೇದಿಕೆಯಲ್ಲಿ ಇರಲಿಲ್ಲ. ಹೀಗಾಗಿ, ಅವರ ಹೆಸರು ತೆಗೆದುಕೊಳ್ಳಲಿಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸುವುದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಅವರು, ‘ಡಿ.ಕೆ.ಶಿವಕುಮಾರ್ ಅವರನ್ನು ಅವಮಾನಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.
‘ನನ್ನ ಹಾಗೂ ಶಿವಕುಮಾರ್ ನಡುವೆ ಒಡಕು ಮೂಡಿಸಲು ಬಿಜೆಪಿಯವರು ಇಂಥ ಹೇಳಿಕೆ ನೀಡುತ್ತಾರೆ. ಅವರು ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲೇ ಇರುತ್ತಾರೆ’ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ವಕೀಲರನ್ನು ಭೇಟಿಯಾಗಲು ಸಮಯ ತೆಗೆದುಕೊಂಡಿದ್ದ ತುರ್ತು ಕಾರ್ಯ ನಿಮಿತ್ತ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ತಿಳಿಸಿ ದೆಹಲಿಗೆ ಹೋಗಿದ್ದೆ. ಯಾವುದೇ ರಾಜಕೀಯದ ಕಾರಣದಿಂದ ಹೋಗಿರಲಿಲ್ಲ’ ಎಂದು ಹೇಳಿದರು.
ಸಿಎಂ–ಡಿಸಿಎಂ ಜೊತೆಯಲ್ಲೇ ನಿಂತು ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಪಿ ಮಾಡುತ್ತಾರೆ: ‘ಸರ್ಕಾರದ ಸಾಧನೆಗಳ ಬಗ್ಗೆ ಸುಳ್ಳು ಹೇಳುವ ಬಿಜೆಪಿಯವರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ. ಅಲ್ಲದೆ, ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಅವರು ಇತರ ರಾಜ್ಯದಲ್ಲಿ ಅನುಕರಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.