ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಲು ಉತ್ಪಾದಕ ರೈತರ ಮೇಲೆ ವಿಶೇಷ ಕಾಳಜಿ ಇದ್ದು, ಅವರ ಪ್ರಗತಿಗೆ ಹಾಗೂ ಹಾಲು ಒಕ್ಕೂಟಗಳ ಅಭಿವೃದ್ಧಿಗೆ ಪೂರಕವಾಗಿ ರಾಜ್ಯದಲ್ಲಿ 500 ಹಾಲು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದಾರೆ ಎಂದು ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಮಿನಿ ಗ್ಯಾಲಕ್ಸಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಗ್ರಾಹಕರಿಗೆ ಸದಾ ದೊರಕಬೇಕು. ಬೇರೆ ಬ್ರ್ಯಾಂಡ್ ಹಾಲುಗಳತ್ತ ಗ್ರಾಹಕರು ಹೋಗದೇ ನಮ್ಮ ರೈತರು ಉತ್ಪಾದಿಸುವ ಹಾಲನ್ನೇ ಖರೀದಿಸಲು ಅನುಕೂಲ ಮಾಡಿಕೊಡಲು ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಏಕಕಾಲದಲ್ಲಿ ನಂದಿನಿ ಗ್ಯಾಲಾಕ್ಸಿ ಕೇಂದ್ರಗಳನ್ನು ಉದ್ಘಾಟಿಸಿದ್ದಾರೆ. ಜಿಲ್ಲೆಯಲ್ಲಿ 20 ಕೇಂದ್ರಗಳಿಗೆ ಚಾಲನೆ ಸಿಕ್ಕಿದೆ ಎಂದು ಹೇಳಿದರು.
ತಿ.ನರಸೀಪುರ ಪಟ್ಟಣದಲ್ಲಿ ಮೊದಲ ಬಾರಿಗೆ 3 ಸಾವಿರ ಲೀಟರ್ ಹಾಲು ಸಂಗ್ರಹಿಸುವ ಕೋಲ್ಡ್ ಸ್ಟೋರೇಜ್ ತೆರೆಯಲಾಗಿದೆ. ಗ್ರಾಹಕರಿಗೆ ಎಲ್ಲ ನಂದಿನಿ ಕೇಂದ್ರಗಳಲ್ಲಿ ಸದಾ ಹಾಲು ದೊರಕಲಿದೆ. ಮಾರಾಟ ಪ್ರತಿನಿಧಿಗಳಿಗೂ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೈನುಗಾರಿಕೆಯಿಂದ ರೈತರಿಗೆ ಹೆಚ್ಚು ಆದಾಯ ಸಿಗಲೆಂದು ಸಿದ್ದರಾಮಯ್ಯ ಅವರು ಲೀಟರ್ ಹಾಲಿಗೆ ₹4 ಹೆಚ್ಚಳ ಮಾಡಿ, ಆ ಹಣ ನೇರವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.
ಮದ್ಗಾರ ಲಿಂಗಯ್ಯನ ಹುಂಡಿ ಶೂನ್ಯ ಪೀಠದ ಮಠಾಧ್ಯಕ್ಷ ಗೌರಿಶಂಕರ ಸ್ವಾಮೀಜಿ ನಂದಿನಿ ಮಿನಿ ಗ್ಯಾಲಕ್ಸಿ ನೂತನ ಕೇಂದ್ರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಮೈಮೂಲ್ ಮಾಜಿ ಅಧ್ಯಕ್ಷ ಓಂ ಪ್ರಕಾಶ್, ನಂದಿನಿ ಮಿನಿ ಗ್ಯಾಲಕ್ಸಿ ಮಾಲೀಕ ಪರಶಿವಮೂರ್ತಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಹದೇವಸ್ವಾಮಿ, ಎಂ.ಎಲ್. ಹುಂಡಿ ಪ್ರಭುಸ್ವಾಮಿ, ಸುಜ್ಜಲೂರು ಚಿಕ್ಕಮಾದಪ್ಪ, ಕೆಬ್ಬೇಹುಂಡಿ ಶಿವಕುಮಾರ್, ಪಿಎಸಿಸಿಎಸ್ ಅಧ್ಯಕ್ಷ ಹೆಳವರಹುಂಡಿ ನಟರಾಜು, ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ. ಶಿವಮಲ್ಲಪ್ಪ, ಬಸವ ಬಳಗದ ಪರಮೇಶ್ ಪಟೇಲ್, ಮಹಾಸಭಾ ಅಧ್ಯಕ್ಷ ಎಸ್.ಎಂ.ಆರ್. ಪ್ರಕಾಶ್, ವಿಜಯ್ ಕುಮಾರ್, ಹೋಟೆಲ್ ರಾಜಣ್ಣ, ಕುಮಾರ್, ತೊಟ್ಟವಾಡಿ ಮಹಾದೇವಸ್ವಾಮಿ, ಚಂದ್ರಾಧರ, ರವಿ, ನಾಗಭೂಷಣ್, ಸೋಸಲೆ ಗಿರಿಮಲ್ಲೇಶ್, ಜಿ. ಎಲ್. ಉಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.