ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಮೈಸೂರಿನಲ್ಲಿ ಪ್ರಗತಿಪರ ಚಿಂತಕರು, ಸಮಾಜವಾದಿ ಹೋರಾಟಗಾರರು, ಪ್ರಾಧ್ಯಾಪಕರು ಹಾಗೂ ಜಾತ್ಯತೀತ ಚಿಂತನೆಯ ಸಾಹಿತಿಗಳ ಜೊತೆ ಚರ್ಚೆ ನಡೆಸಿ, ಸಲಹೆ ಪಡೆದಿದ್ದಾರೆ.
'ಪ್ರಮುಖರ ಜೊತೆ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿರುವುದು ನಿಜ. ಇದೇನೂ ಗೋಪ್ಯ ಸಭೆ ಅಲ್ಲ. ದೇಶದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬಂದಿರುವುದರಿಂದ ತಳ ಸಮುದಾಯದವರು, ಬಡವರು ಜೀವನ ನಡೆಸಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಶಯ ವ್ಯಕ್ತವಾಗಿದೆ. ಹಲವು ಸಲಹೆಗಳು ಬಂದಿವೆ. ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್ ಸೋಲಿನ ವಿಚಾರವಾಗಿ ಕೆಲ ದಿನಗಳ ಹಿಂದೆ ಇಡೀ ದಿನ ಆತ್ಮಾವಲೋಕನ ಸಭೆ ನಡೆದಿದೆ. ಹಲವು ವಿಚಾರಗಳನ್ನು ಚರ್ಚಿಸಿದ್ದೇವೆ. ಸೋಲಿನಿಂದ ಧೃತಿಗೆಡಬೇಕಾಗಿಲ್ಲ. ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಗಳಿಗೆ ಅನುಕೂಲ ಹೆಚ್ಚು. ಬಿಜೆಪಿ–ಜೆಡಿಎಸ್ ಒಳಒಪ್ಪಂದ ಮಾಡಿಕೊಳ್ಳುತ್ತಿವೆ. ಅಧಿಕಾರ ದುರುಪಯೋಗಪಡಿಸಿಕೊಂಡು, ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ’ ಎಂದರು.
ಲೀ ರುಚಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ರಂಗಕರ್ಮಿ ಜನಾರ್ಧನ್ (ಜನ್ನಿ), ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಆರ್.ಧ್ರುವನಾರಾಯಣ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯ ಆಪ್ತ ಬಳದವರು ಪಾಲ್ಗೊಂಡಿದ್ದರು. ಬಳಿಕ ಪ.ಮಲ್ಲೇಶ್ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.