ADVERTISEMENT

ಸಿದ್ದರಾಮಯ್ಯ ಮನೆಯಿಂದ ದುಡ್ಡು ಕೊಟ್ಟಿಲ್ಲ: ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 8:06 IST
Last Updated 1 ನವೆಂಬರ್ 2020, 8:06 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಮೈಸೂರು: ‘ರಾಜರಾಜೇಶ್ವರಿನಗರ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು ತಮ್ಮ ಮನೆಯಿಂದ ದುಡ್ಡು ತಂದು ಕೊಟ್ಟಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿರುಗೇಟು ನೀಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್‌.ಆರ್‌.ನಗರಕ್ಕೆ ₹ 2 ಸಾವಿರ ಕೋಟಿ ಅನುದಾನ ನೀಡಿದ್ದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿ, ‘ರಾಜ್ಯ ಸರ್ಕಾರಕ್ಕೆ ಬೆಂಗಳೂರಿನಿಂದ ಅತಿಹೆಚ್ಚು ಆದಾಯ ಬರುತ್ತದೆ. ಆದನ್ನು ಬೆಂಗಳೂರಿನ ಎಲ್ಲ ಕ್ಷೇತ್ರಗಳಿಗೆ ಹಂಚಲಾಗುತ್ತದೆ. ಆರ್.ಆರ್‌.ನಗರಕ್ಕೂ ಪಾಲು ದೊರೆತಿದೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ’ ಎಂದರು.

ಆರ್‌.ಆರ್‌. ನಗರದಲ್ಲಿ ಮುನಿರತ್ನ 35 ರಿಂದ 40 ಸಾವಿರ ಮತಗಳಿಂದ ಗೆಲ್ಲುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಅವರು ಜನರ ಕಷ್ಟಗಳಿಗೆ ಸ್ಪಂದಿಸಿದ್ದರು. ಕಾಂಗ್ರೆಸ್‌ನವರು ಲಾಕ್‌ಡೌನ್‌ ಸಮಯದಲ್ಲಿ ಒಂದೇ ಒಂದು ಗ್ಲಾಸ್ ನೀರು ಕೊಟ್ಟಿಲ್ಲ ಎಂದು ಆರೋಪಿಸಿದರು.

ADVERTISEMENT

ಸಿದ್ದರಾಮಯ್ಯ ಬೆಳೆಸಿಲ್ಲ: ‘ಭೈರತಿ ಬಸವರಾಜು, ಮುನಿರತ್ನ ಹಾಗೂ ನನ್ನನ್ನು ಸಿದ್ದರಾಮಯ್ಯ ಬೆಳೆಸಿಲ್ಲ. ನಾವು ಮೂರು ಜನ ಹಿಂದಿನಿಂದಲೂ ಕಾಂಗ್ರೆಸ್‌ನಲ್ಲಿ ಇದ್ದವರು. ಸಿದ್ದರಾಮಯ್ಯ ಆ ಬಳಿಕ ಸೇರಿದವರು’ ಎಂದು ಹೇಳಿದರು.

‘ನಾವು ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಪ್ರಶ್ನೆಯೇ ಉದ್ಭವಿಸದು. ಅವರ ಮೇಲೆ ಮುನಿಸಿಕೊಂಡು ಪಕ್ಷ ಬಿಟ್ಟಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಆದಂತಹ ಅವಮಾನದಿಂದಾಗಿ ಪಕ್ಷದಿಂದ ಹೊರಬಂದಿದ್ದೆವು. ಸಿದ್ದರಾಮಯ್ಯ ಆವಾಗಲೇ ನಮ್ಮ ಜತೆ ಮಾತನಾಡಬೇಕಿತ್ತು. ಸಮಸ್ಯೆಯನ್ನು ಅಂದೇ ಬಗೆಹರಿಸದೆ ಈಗ ಒದ್ದಾಡಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.