
ಮೈಸೂರು: ‘ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಸಮಾಜದಲ್ಲಿ ಶಾಂತಿ ಹಾಗೂ ಸಹೋದರತ್ವ ರಕ್ಷಣೆಗೆ ಕಾಯ್ದೆ ರೂಪಿಸಲಾಗಿದೆ. ದ್ವೇಷ ಭಾಷಣ ನಿಯಂತ್ರಿಸಲೆಂದೇ ಕ್ರಮ ಕೈಗೊಂಡಿದ್ದೇವೆ. ತಾವು ದ್ವೇಷಭಾಷಣ ಮಾಡುತ್ತೇವೆಂಬ ಕಾರಣಕ್ಕೇ ಬಿಜೆಪಿಯವರು ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.
‘ಕೆಲವರನ್ನು ಗುರಿಯಾಗಿಸಿ ದ್ವೇಷ ಭಾಷಣ ತಡೆ ಮಸೂದೆ ರೂಪಿಸಲಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ, ‘ಕಾಯ್ದೆ ಎಲ್ಲರಿಗೂ ಅನ್ವಯವಾಗುತ್ತದೆ. ಬಿಜೆಪಿಯವರಷ್ಟೇ ಏಕೆ ವಿರೋಧಿಸುತ್ತಾರೆ? ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲಸುತ್ತದೆಯೇ’ ಎಂದು ಪ್ರಶ್ನಿಸಿದರು.
ಲಪಟಾಯಿಸೋದಲ್ಲ, ಹಣ ಬಿಡುಗಡೆಯಾಗಿಲ್ಲ:
‘ಗೃಹಲಕ್ಷ್ಮಿ ಯೋಜನೆಯ ಹಣ ಲಪಟಾಯಿಸಲಾಗಿದೆ’ ಎಂಬ ಬಿಜೆಪಿಯವರ ಆರೋಪಕ್ಕೆ, ‘ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುವಾಗ ಲಪಟಾಯಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ? ಆ ಹಣವನ್ನು ಬೇರಾರೂ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ತಿಳಿಸಿದರು.
‘ಫೆಬ್ರುವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು. ಈವರೆಗೆ 23 ತಿಂಗಳ ಹಣವನ್ನು ಕೊಟ್ಟಿದ್ದೇವೆ. ಹಣವಿಲ್ಲದಿದ್ದರೆ ಇಷ್ಟೆಲ್ಲ ಕೊಡುವುದಕ್ಕೆ ಸಾಧ್ಯವಾಗುತ್ತಿತ್ತೇ?’ ಎಂದರು.