ಸಿದ್ದರಾಮಯ್ಯ , ಮುಖ್ಯಮಂತ್ರಿ
ಮೈಸೂರು: ‘ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಲಾರಿ ನುಗ್ಗಿದ್ದರಿಂದ ಮೃತಪಟ್ಟವರ ಕುಟುಂಬಗಳಿಗೆ ನಾವು ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಕೊಟ್ಟಿದ್ದರು?, ಅವರೇನಾದರೂ ಹೆಚ್ಚಾಗಿ ಕೊಟ್ಟಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ, ಅವರು ಮಾಡಿಲ್ಲವಲ್ಲ?, ತಲಾ ₹10 ಲಕ್ಷ ಪರಿಹಾರ ನೀಡುವಂತೆ ಬಿಜೆಪಿಯವರು ಒತ್ತಾಯಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪರಿಹಾರ ಕೊಡುವುದು, ಸತ್ತವರನ್ನು ವಾಪಸ್ ಕರೆತರುತ್ತೇವೆ ಎಂದಲ್ಲ. ಇಂತಹ ಘಟನೆಗಳಾದಾಗ ಸರ್ಕಾರ ಹಿಂದಿನಿಂದಲೂ ಪರಿಹಾರ ನೀಡುತ್ತಾ ಬಂದಿದೆ. ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸವಿದು. ಯಾರೋ ಒಬ್ಬರಿಗೆ ವಿಶೇಷವಾಗಿ ಹೆಚ್ಚಿಸುವಂಥದ್ದಲ್ಲ; ಎಲ್ಲರಿಗೂ ಸಮಾನವಾಗಿ ಕೊಡಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.
‘ಅಪಘಾತಗಳನ್ನು ತಡೆಯಲೆಂದೇ ರಸ್ತೆ ಸುರಕ್ಷತಾ ಕಾನೂನುಗಳನ್ನು ಮಾಡಿದ್ದೇವೆ. ಚಾಲಕರ ತಪ್ಪುಗಳಿಂದ ಅಪಘಾತಗಳಾದರೆ ಸರ್ಕಾರ ಹೇಗೆ ಹೊಣೆ ಆಗುತ್ತದೆ? ಮೆರವಣಿಗೆಗಳ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಹಾಸನದಲ್ಲಿ ಲಾರಿ ಮೆರವಣಿಗೆ ಮೇಲೆ ನುಗ್ಗಿದ್ದರಿಂದ ಅನಾಹುತ ಸಂಭವಿಸಿದೆ. ಮೃತರಿಗೆ ಗೌರವ ಸಲ್ಲಿಸಿದ್ದೇವೆ. ಪರಿಶೀಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸ್ಥಳಕ್ಕೆ ಕಳುಹಿಸಿದ್ದೇನೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಮಣಿಪುರದಲ್ಲಿ ಗಲಾಟೆ ನಡೆಯುತ್ತಿದ್ದಾಗ ಹೋಗಿರಲಿಲ್ಲ. ಈಗ ಭೇಟಿ ಕೊಟ್ಟಿದ್ದಾರೆ. ಈವರೆಗೆ ಹೋಗಿರಲಿಲ್ಲವೇಕೆ?’ ಎಂದು ಕೇಳಿದರು. ‘ವಿರೋಧಪಕ್ಷದವರು ಒತ್ತಡ ಹಾಕಿದ ಪರಿಣಾಮ ಈಗ ಭೇಟಿ ಕೊಟ್ಟಿದ್ದಾರೆ’ ಎಂದು ಟೀಕಿಸಿದರು.
‘ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ವಿಳಂಬ ಆಗುತ್ತಿಲ್ಲ. ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡಬಾರದು. ನನಗೆ ತಿಳಿದ ಮಟ್ಟಿಗೆ, ವಿಳಂಬ ಆಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಾಯಿಗೆ ಬಂದಂತೆ ಮಾತನಾಡಿದರೆ, ಪ್ರಚೋದನಕಾರಿ ಭಾಷಣ ಮಾಡಿದರೆ ಏನು ಮಾಡಬೇಕು? ನೆಮ್ಮದಿ, ಶಾಂತಿ ಕಾಪಾಡುವುದು ಅತ್ಯಂತ ಅವಶ್ಯ. ಹೀಗಾಗಿ, ಪ್ರಚೋದನಕಾರಿಯಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದು ರಾಜಕಾರಣ ಅಲ್ಲ’ ಎಂದು ಪ್ರತಿಕ್ರಿಯಿಸಿದರು. ‘ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಪೊಲೀಸರು ಕ್ರಮ ವಹಿಸುತ್ತಾರೆ’ ಎಂದು ಹೇಳಿದರು.
‘ನಾನೂ ಹಿಂದೂನೇ. ನನ್ನ ಹೆಸರಿನಲ್ಲಿ ಈಶ್ವರ ಹಾಗೂ ವಿಷ್ಣು ಎಂಬ ಎರಡು ದೇವರುಗಳಿವೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು’ ಎಂದು ಹೇಳಿದರು.
‘ಮತಾಂತರ ಆಗುವುದು ಬೇಡ ಎಂದು ಹೇಳಿದರೂ, ಕೆಲವರು ವ್ಯವಸ್ಥೆಯ ಪರಿಣಾಮವಾಗಿ ಮತಾಂತರ ಆಗುತ್ತಾರೆ. ನಮ್ಮ ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಸಮಾನ ಅವಕಾಶಗಳು ಎಲ್ಲರಿಗೂ ಸಿಕ್ಕಿದ್ದರೆ ಏಕೆ ಮತಾಂತರ ಆಗುತ್ತಿದ್ದರು? ಅಸ್ಪೃಶ್ಯತೆ ಏಕೆ ಬಂತು? ನಾವು ಹುಟ್ಟು ಹಾಕಿದ್ವಾ? ಅಸಮಾನತೆ ಯಾವುದೇ ಧರ್ಮದಲ್ಲಾದರೂ ಇರಲಿ. ಮತಾಂತರ ಆಗುವಂತೆ ನಾವಾಗಲಿ ಅಥವಾ ಬಿಜೆಪಿಯವರಾಗಲಿ ಹೇಳಿಲ್ಲ. ಮತಾಂತರ ಆಗುವುದು ಅವರವರ ಹಕ್ಕು’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.