ADVERTISEMENT

ದೇಶದಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 14:21 IST
Last Updated 5 ಜೂನ್ 2022, 14:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್ಎಸ್‌) ಮತ್ತು ಹಿಂದೂ ಮಹಾಸಭಾದವರು ಸಂವಿಧಾನವನ್ನು‌ ಒಪ್ಪಿಕೊಂಡಿಲ್ಲ. ಆದ್ದರಿಂದಲೇ ಅವರು ಬದಲಾಯಿಸುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಶೋಧಕ ವಿದ್ಯಾರ್ಥಿಗಳೊಂದಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಸರ್ಕಾರ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಡಾ.ಬಿ.ಆರ್. ಅಂಬೇಡ್ಕರ್‌ ಅವರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಕೇಶವ ಹೆಡ್ಗೇವಾರ್‌ ಅವರು ಆರ್‌ಎಸ್‌ಎಸ್‌ ಸ್ಥಾಪಿಸಿದರು. ಆ ಸಂಘದಲ್ಲಿ ಮೇಲ್ವರ್ಗದವರನ್ನು ಹೊರತುಪಡಿಸಿ ಕೆಳಜಾತಿಯವರು ಪ್ರಮುಖ ಹುದ್ದೆಗೇರಿಲ್ಲ. ಸರಸಂಘಚಾಲಕರನ್ನು ಮಾಡಿಲ್ಲ. ಬೇರೆಯವರನ್ನು ಯಾಕೆ ಮಾಡಿಲ್ಲ? ಶ್ರೇಣಿಕೃತ ವ್ಯವಸ್ಥೆಯನ್ನು ಗಟ್ಟಿ ಮಾಡುವ ಹುನ್ನಾರವಿದು. ಸಂವಿಧಾನ ಇಲ್ಲದಿದ್ದರೆ ದೇಶದ ಜನರ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡರೆ ಆತಂಕವಾಗುತ್ತದೆ’ ಎಂದರು.

ಪ್ರಹಾರ ಮಾಡಿದಂತೆಯೇ:‘ಸಂವಿಧಾನ ಇಲ್ಲದಿದ್ದರೆ ನಾನು ಮುಖ್ಯಮಂತ್ರಿ ಅಗುತ್ತಿರಲಿಲ್ಲ. ಸಂವಿಧಾನ ಮೇಲೆ ಪ್ರಹಾರ ನಡೆಯುತ್ತಿದೆ ಎಂದರೆ ತಳ ಸಮುದಾಯಗಳ ಮೇಲೆ ಪ್ರಹಾರ ಮಾಡಿದಂತೆಯೇ ಅರ್ಥ’ ಎಂದು ವಿಶ್ಲೇಷಿಸಿದರು.

‘ಕರ್ನಾಟಕದ ಇತಿಹಾಸದಲ್ಲೇ ಆಯಾ ಜನಸಂಖ್ಯೆ ಅನುಗುಣವಾಗಿ ಹಣ ಖರ್ಚು‌ ಮಾಡಲು ಕಾನೂನು ಮಾಡಲಾಯಿತು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಹೆಚ್ಚಿಸಲಾಯಿತು. ಜನಸಂಖ್ಯೆಗೆ ತಕ್ಕಂತೆ ಅನುದಾನ ಮೀಸಲಿಟ್ಟಿದ್ದೆ. ಇದೆಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಮಾಡಲು ಸಾಧ್ಯವಾಗಲಿಲ್ಲವೇಕೆ? ಯಾರಪ್ಪನ ಮನೆ ದುಡ್ಡನ್ನೂ ಕೊಡಲಿಲ್ಲ. ಜನರ ದುಡ್ಡನ್ನು ಜನರಿಗೆ ಕೊಟ್ಟಿದ್ದೆ’ ಎಂದರು.

ಸಂಸದ ಪ್ರತಾಪ ಸಿಂಹ ಆರೋಪಗಳಿಗೆ ತಿರುಗೇಟು ನೀಡಿದ ಅವರು, ‘ಮೋದಿ ಅಧಿಕಾರಕ್ಕೆ ಬಂದಾಗ ₹ 53 ಲಕ್ಷ ಕೋಟಿ ಸಾಲವಿತ್ತು. ಈಗ ₹ 155 ಲಕ್ಷ ಕೋಟಿ ಸಾಲವಾಗಿದೆ. ಇಂಥವರ ಕೈಯಲ್ಲಿ ಆಡಳಿತವಿದ್ದರೆ ದೇಶ ರಾಜ್ಯ ಉಳಿಯಲು ಸಾಧ್ಯವಿಲ್ಲ. ‌ಬಿಜೆಪಿಯವರನ್ನು ಸೋಲಿಸಬೇಕು’ ಎಂದು ಕರೆ ನೀಡಿದರು.

ಸಾಂಸ್ಕೃತಿಕ ಭಯೋತ್ಪಾದನೆ:‘ದೇಶದಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಪಠ್ಯದಲ್ಲಿ ಅಂಬೇಡ್ಕರ್ ಅವರ ಅನೇಕ‌ ವಿಚಾರಗಳನ್ನು ತೆಗೆದು ಹಾಕಲಾಗಿದೆ. ಪರಿಷ್ಕರಣ‌‌ ಸಮಿತಿ ಮಾಡಿರುವ ಪಠ್ಯಕ್ರಮವನ್ನು ತೆಗೆದುಹಾಕಬೇ ಹೊರತು ಸಮಿತಿಯನ್ನು ವಿಸರ್ಜಿಸಿದರೆ ಪ್ರಯೋಜನವಿಲ್ಲ. ಇಂಥವರನ್ನು ಎಲ್ಲ ಚುನಾವಣೆಯಲ್ಲೂ ಸೋಲಿಸಬೇಕು. ಇವರು ಅಲ್ಪಸಂಖ್ಯಾತರ ಜೊತೆಗೆ ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿಯೂ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಮುಖಂಡ ಡಾ.ಎಚ್.ಸಿ. ಮಹಾದೇವಪ್ಪ ಮಾತನಾಡಿ, ‘ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಪ್ರತಿ ಕ್ಷೇತ್ರದಲ್ಲೂ ಪರಿಣತಿ ಹೊಂದಿದ್ದಾರೆ. ಅವರನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು’ ಎಂದು ಕೋರಿದರು.

‘ಬದ್ಧತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಗೊತ್ತಿಲ್ಲದವರು‌ ಮುಂಚೂಣಿಗೆ ಬರಲು ನಾವು ಕಾರಣವಾಗುವ ಬದಲಿಗೆ ಯೋಗ್ಯರನ್ನು ಗೆಲ್ಲಿಸಬೇಕು. ಸಂವಿಧಾನದ ಆಶಯಗಳು ಮೂಲೆಗುಂಪಾಗಿವೆ. ಎಚ್ಚರಿಕೆ ನೀಡಿದರೂ ಕೈ ಹಾಕಿದ್ದಾರೆ. ಧರ್ಮ ಮತ್ತು ಜಾತಿ ಹೆಸರಿನಲ್ಲಿ ಎದ್ದಿರುವ ಕೂಗನ್ನು ದಮನ ಮಾಡದಿದ್ದರೆ ದೊಡ್ಡ ಅಪಾಯ ಎದುರಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಭ್ಯರ್ಥಿ ಮಧು ಜಿ.ಮಾದೇಗೌಡ, ಮುಖಂಡರಾದ ಎಂ.ಪ್ರದೀಪ್ ಕುಮಾರ್, ಕೆ.ಎಸ್. ಶಿವರಾಮ್, ನಾಗೇಶ್ ಇದ್ದರು.

ಒಳ್ಳೆಯವರ ಕೈಲಿದ್ದರೆ...

ಸಂವಿಧಾನವು ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯದಾಗುತ್ತದೆ. ಆದರೆ, ಅದಕ್ಕೆ ವಿರುದ್ಧವಾಗಿ ಇರುವವರ ಕೈಯಲ್ಲಿ ಆಡಳಿತವಿದೆ

ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.