ಮೈಸೂರು: ‘ಅಧಿಕಾರಿಗಳು ಜಡತ್ವದ ಸಮಾಜವನ್ನು ಚಲನಶೀಲವನ್ನಾಗಿಸಲು ಶ್ರಮಿಸಬೇಕು. ಸಂವಿಧಾನದ ಧ್ಯೇಯೋದ್ಧೇಶ ಜಾರಿಯಾಗುವಂತೆ ಮಾಡುವುದು ನಮ್ಮ ಕರ್ತವ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ, ಐಐಪಿಐಯು ಶುಕ್ರವಾರ ಆಯೋಜಿಸಿದ್ದ ಕೆಎಎಸ್ ತಾಲ್ಲೂಕು ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೆಂಟು ವರ್ಷ ಆಗಿದೆ. ಆದರೆ ಸಂವಿಧಾನದ ಆಶಯಗಳು ಈಡೇರಿಲ್ಲ. ಅಸಮಾನತೆ, ಅವಕಾಶ ವಂಚಿತರು, ಧರ್ಮ ಜಾತಿ ವ್ಯವಸ್ಥೆ ಮುಂದುವರೆದಿದೆ. ಅಸಮಾನತೆ ಹೋಗಲಾಡಿಸುವುದು ರಾಜಕಾರಣಿಗಳ ಜವಾಬ್ದಾರಿಯಷ್ಟೇ ಅಲ್ಲ, ಅಧಿಕಾರಿಗಳ ಪಾಲ್ಗೊಳ್ಳುವಿಕೆಯೂ ಅಗತ್ಯ’ ಎಂದು ವಿವರಿಸಿದರು.
‘ಹಿರಿಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ವೈಚಾರಿಕತೆ, ವೈಜ್ಞಾನಿಕ ಬೆಳೆಸಿಕೊಂಡಿದ್ದೇವೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ವಿದ್ಯಾವಂತರೇ ಜಾತಿ, ಮೌಢ್ಯ, ಮೂಢನಂಬಿಕೆ ಅನುಸರಿಸುತ್ತಿರುವುದು ವಿಷಾದನೀಯ. ನಾವು ಐದು ವರ್ಷದ ಬಳಿಕ ಚುನಾವಣೆ ಎಂಬ ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ಆದರೆ ಸರ್ಕಾರಿ ಅಧಿಕಾರಿಗಳಿಗೆ ನಿರಂತರ ಸೇವೆ ಸಲ್ಲಿಸುವ ರಕ್ಷಣೆಯನ್ನು ಸಂವಿಧಾನ ಒದಗಿಸಿದೆ. ಹೀಗಾಗಿ ನಿಮಗೆ ಸಮಾಜ ಸುಧಾರಣೆ ಜವಬ್ದಾರಿ ಹೆಚ್ಚಿದೆ’ ಎಂದು ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಸ್ವಾತಂತ್ರ್ಯ ಸಿಕ್ಕರೂ ಜನಸಾಮಾನ್ಯರು ಅಧಿಕಾರಿಗಳನ್ನು ಹುಡುಕುತ್ತಾ ಕಚೇರಿಗೆ ಸುತ್ತಾಡುತ್ತಿದ್ದಾರೆ ಎಂದರೆ ನಮ್ಮ ಕರ್ತವ್ಯದಲ್ಲಿ ಹಿಮ್ಮುಖವಾಗಿ ಸಾಗುತ್ತಿದ್ದೇವೆ ಎಂದರ್ಥ. ಜನರ ಅರ್ಜಿಯಲ್ಲಿನ ನೋವನ್ನು ಅರ್ಥೈಸಿಕೊಂಡು ಜನಪರವಾಗಿ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಭಾರತೀಯ ಆಡಳಿತ ಸೇವೆಯ ಬೀದರ್ ಜಿಲ್ಲಾ ಉಸ್ತುವಾರಿ ಡಿ.ರಣದೀಪ್, ಎಟಿಐ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ ಭಾಗವಹಿಸಿದ್ದರು.
ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದು ಮತ ಅಥವಾ ಅಧಿಕಾರಕ್ಕಾಗಿ ಅಲ್ಲ. ಅದು ಅಸಮಾನತೆ ತೊಡೆದು ಹಾಕುವ ದೊಡ್ಡ ಹೆಜ್ಜೆ–ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.