ADVERTISEMENT

ಸಿದ್ದರಾಮಯ್ಯ ಅವರೇ 5 ವರ್ಷ ಸಿ.ಎಂ: ಯತೀಂದ್ರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:10 IST
Last Updated 11 ಜುಲೈ 2025, 7:10 IST
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನವೆಂಬರ್‌ಗೆ ಎರಡೂವರೆ ವರ್ಷ ಆಗಲಿದ್ದು, ಸಿ.ಎಂ. ಆಗುವ ಆಸೆ ಇಟ್ಟುಕೊಂಡಿರುವ ಕೆಲವರು ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಸಿದ್ದರಾಮಯ್ಯ ಅವರೇ ಐದು ವರ್ಷ ಸಿ.ಎಂ. ಆಗಿರುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಿಜೆಪಿಯವರು ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಲೇ ಇದ್ದಾರೆ. ನಮ್ಮ ಪಕ್ಷದ ಹೈಕಮಾಂಡ್‌ ಹಾಗೂ ಶಾಸಕರು ಇದನ್ನು ತೀರ್ಮಾನಿಸುತ್ತಾರೆ. ಎಐಸಿಸಿ ಕಾರ್ಯದರ್ಶಿಯೇ ಸಿ.ಎಂ. ಬದಲಾವಣೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದರು.

ಕಾಂಗ್ರೆಸ್ ಒಬಿಸಿ ಸಮಿತಿಗೆ ಸಿದ್ದರಾಮಯ್ಯ ನೇಮಕ ಕುರಿತು ಪ್ರತಿಕ್ರಯಿಸಿ, ‘ಅದೇನು ಪ್ರಮೋಷನ್‌ ಇಲ್ಲ. ಮುಖ್ಯಮಂತ್ರಿ ಬದಲಾವಣೆಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.

ADVERTISEMENT

‘ಉಚಿತ ಭಾಗ್ಯಗಳಿಂದ ಜನರು ಸೋಮಾರಿ ಆಗುತ್ತಿದ್ದಾರೆ’ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ ‘ಶ್ರೀಮಂತರ ಸಾಲ ಮನ್ನಾ ಮಾಡಿದಾಗ ಕೆಂದ್ರ ಸರ್ಕಾರವನ್ನು ಪ್ರಶ್ನಿಸದ ರಂಭಾಪುರಿ ಶ್ರೀಗಳಿಗೆ ಬಡವರಿಗೆ ಉಚಿತವಾಗಿ ಕೊಟ್ಟಾಗ ಏಕೆ ಕಣ್ಣುರಿ ? ಈ ಹಿಂದೆ ಭಾಗ್ಯಗಳನ್ನು ಕೊಟ್ಟಾಗಲೂ ಇದೇ ರೀತಿ ಹೇಳುತ್ತಿದ್ದರು. ಭಾಗ್ಯಗಳು ನೀಡಿದಾಗ ಯಾರಾದರೂ ಸೋಮಾರಿಗಳಾದರೆ?’ ಎಂದು ಪ್ರಶ್ನಿಸಿದರು.

‘ಬಡವರು ಹೊಟ್ಟೆ ತುಂಬ ಊಟ ತಿಂದು ಸೋಮಾರಿ ಆಗುವುದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲವೂ ಸಿಗುವುದಿಲ್ಲ, ಜೀವನಕ್ಕಾಗಿ ದುಡಿಯುತ್ತಾರೆ. ಇದು ತಲೆ ತಲಾಂತರದಿಂದ ಬೇರೊಬ್ಬರ ಕೈಯಲ್ಲಿ ದುಡಿಸಿಕೊಂಡು ಸುಖವಾಗಿ ಬಂದಿರುವವರು ಹೇಳುವ ಮಾತು’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.