ADVERTISEMENT

ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿ? ಚರ್ಚೆ ಜೋರು

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವಿಶ್ಲೇಷಣೆ

ಎಂ.ಮಹೇಶ
Published 9 ನವೆಂಬರ್ 2022, 10:24 IST
Last Updated 9 ನವೆಂಬರ್ 2022, 10:24 IST
   

ಮೈಸೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾದಿಂದ ಸ್ಪರ್ಧಿಸಲಿದ್ದಾರೆ’ ಎಂಬ ಸುದ್ದಿ ಮತ್ತು ಚರ್ಚೆಗಳು ಕ್ಷೇತ್ರದಾದ್ಯಂತ ಜೋರಾಗಿಯೇ ನಡೆಯುತ್ತಿವೆ.

ಕ್ಷೇತ್ರವನ್ನು ಈಗ, ಸಿದ್ದರಾಮಯ್ಯ ಪುತ್ರ, ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದಾರೆ. ‘ಮುಂಬರುವ ಚುನಾವಣೆಯಲ್ಲಿ ತಂದೆಗಾಗಿ ಕ್ಷೇತ್ರವನ್ನು ಬಿಟ್ಟು ಕೊಡಲು ಸಿದ್ಧ’ ಎಂದು ಯತೀಂದ್ರ ಕೂಡ ಆಗಾಗ ಹೇಳುತ್ತಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ ಕೂಡ ಕ್ಷೇತ್ರಕ್ಕೆ ಆಗಾಗ ಭೇಟಿ ಕೊಡುತ್ತಿರುವುದು ಹಲವು ವಿಶ್ಲೇಷಣೆಗೆ ಕಾರಣವಾಗಿದೆ. ಬೆಂಬಲಿಗರು ಕೂಡ ಒತ್ತಾಯ ಹೇರುತ್ತಿದ್ದಾರೆ.

‘ವರುಣಾದ ಜನರು ಮತ್ತೊಮ್ಮೆ ಸ್ಪರ್ಧಿಸುವಂತೆ ನನ್ನನ್ನು ಕರೆಯುತ್ತಿದ್ದಾರೆ. ಇಲ್ಲಿಂದ ಗೆದ್ದಿದ್ದರಿಂದಲೇ ನಾನು ಮುಖ್ಯಮಂತ್ರಿಯಾದೆ. ಈ ಜನರ ಋಣವನ್ನು ಏನೇ ಮಾಡಿದರೂ ತೀರಿಸಲಾಗದು’ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿರುವುದರಿಂದ ರಾಜಕೀಯ ವಲಯದಲ್ಲಿ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ.

ADVERTISEMENT

ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಅವರಿಗೆ ತವರಿನ ಈ ಕ್ಷೇತ್ರವೇ ‘ಸುರಕ್ಷಿತ’ ಎಂಬ ಸಲಹೆಯನ್ನೂ ಬೆಂಬಲಿಗರು ನೀಡಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ವರುಣಾದಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ಸಿದ್ದರಾಮಯ್ಯ ಸ್ಪರ್ಧಿಸಿದಲ್ಲಿ ಅವರನ್ನು ಮಣಿಸಲು ಬಿಜೆಪಿ–ಜೆಡಿಎಸ್‌ ಜಂಟಿಯಾಗಿ ಪ್ರತ್ಯಾಸ್ತ್ರಗಳನ್ನು ಹೂಡುವ ಸಾಧ್ಯತೆಯೂ ಇದೆ. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗಿನಿಂದಲೇ ಚರ್ಚೆಯಾಗುತ್ತಿದೆ.

ಅಚ್ಚರಿ ಅಭ್ಯರ್ಥಿಗಳು?:

ಬಿಜೆಪಿಯಿಂದ, ಆ ಪಕ್ಷದ ಸಂಸದೀಯಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಪ್ತರಾಗಿರುವ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷಕಾ.ಪು. ಸಿದ್ದಲಿಂಗಸ್ವಾಮಿ, ಎಂಡಿಸಿಸಿ ನಿರ್ದೇಶಕ ಬಿ.ಎನ್.ಸದಾನಂದ,ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ. ದೇವನೂರು,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲರಾಜಯ್ಯನಹುಂಡಿ ಗುರುಸ್ವಾಮಿ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಹೆಸರುಗಳು ಕೇಳಿಬರುತ್ತಿವೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಪುತ್ರ ಶಿಕಾರಿಪುರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿರುವುದರಿಂದ ವರುಣಾದಲ್ಲಿನ ಸ್ಪರ್ಧೆಯ ಚರ್ಚೆಗಳು ಕ್ಷೀಣವಾಗಿವೆ. ಆದರೆ, ವಿಜಯೇಂದ್ರ ಇಲ್ಲಿನ ಮುಖಂಡರೊಂದಿಗೂ ಸಂಪರ್ಕದಲ್ಲಿದ್ದಾರೆ. ಆದ್ದರಿಂದ, ‌ಆ ಪಕ್ಷದವರು ಕೊನೆ ಕ್ಷಣದಲ್ಲಿಅಚ್ಚರಿ ಅಭ್ಯರ್ಥಿಯನ್ನು ಹಾಕುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಅಧಿಕಾರಿಯೊಬ್ಬರ ಹೆಸರು ಕೂಡ ಹರಿದಾಡುತ್ತಿದೆ.

ಜೆಡಿಎಸ್‌ನಿಂದ ‌ನಿವೃತ್ತ ಪ್ರಾಧ್ಯಾಪಕಬೊಕ್ಕಳ್ಳಿ ಪುಟ್ಟಸುಬ್ಬಪ್ಪ ಅವರ ಪುತ್ರ ಅಭಿಷೇಕ್ (ಹಿಂದಿನ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು), ಅಹಿಂದ ಹೋರಾಟಗಾರ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಆಪ್ತರೂ ಆಗಿರುವ ಜವರಪ್ಪ ಹೆಸರು ಕೇಳಿಬರುತ್ತಿವೆ. ಅಲ್ಲೂ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನುತ್ತವೆ ಪಕ್ಷದ ಮೂಲಗಳು.

ಕೆಆರ್‌ಎಸ್‌ ಪಕ್ಷದಿಂದ ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಹೆಸರು ಕೇಳಿಬರುತ್ತಿದೆ.ಯತೀಂದ್ರ ಕೂಡ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಜನರ ಬೆಂಬಲ ಕೇಳುತ್ತಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ನೆಪದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಸಿದ್ದರಾಮಯ್ಯ ಕಣಕ್ಕಿಳಿದರೆ ಇಡೀ ರಾಜ್ಯದ ಗಮನಸೆಳೆಯಲಿರುವ ಪ್ರಮುಖ ಕ್ಷೇತ್ರಗಳಲ್ಲಿ ವರುಣಾ ಒಂದೆನಿಸಲಿದೆ. ಇಲ್ಲಿನ ಬೆಳವಣಿಗೆಗಳು ಇಡೀ ಜಿಲ್ಲೆಯ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಪಾರುಪತ್ಯ...

ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿ ಇರುವ ಕ್ಷೇತ್ರವಿದು. ಲಿಂಗಾಯತ, ದಲಿತ ಹಾಗೂ ಕುರುಬ ಸಮಾಜದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮುಖ್ಯಮಂತ್ರಿಯನ್ನು ಪಡೆದ ಕ್ಷೇತ್ರವಿದು. 2013ರ ಇಲ್ಲಿಂದ 2ನೇ ಬಾರಿಗೆ ಗೆದ್ದಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೇರಿದ್ದರು.ನಂಜನಗೂಡು, ತಿ.ನರಸೀಪುರ, ಮೈಸೂರು ತಾಲ್ಲೂಕಿನ ಹಲವು ಗ್ರಾಮಗಳನ್ನು ಸೇರಿಸಿ 2008ರಲ್ಲಿ ಈ ಕ್ಷೇತ್ರರೂಪುಗೊಂಡಿತು. ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ,ವರುಣಾಹೋಬಳಿ, ನಂಜನಗೂಡು ತಾಲ್ಲೂಕಿನ ತಾಂಡವಪುರ, ತಗಡೂರು, ಹದಿನಾರು, ಕವಲಂದೆ (ಭಾಗಶಃ), ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಕೂಡ ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಇಲ್ಲಿ ಬಿಜೆಪಿ ಅಥವಾ ಜೆಡಿಎಸ್‌ ಖಾತೆ ತೆರೆಯುವುದು ಇದುವರೆಗೂ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.