ADVERTISEMENT

ಸರ್ಕಾರಿ ಶಾಲೆ ಉಳಿಸಲು ಸಹಿ ಸಂಗ್ರಹ: ಎಐಡಿಎಸ್‌ಒ ಕಾರ್ಯಕರ್ತರಿಂದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಮೇ 2025, 10:21 IST
Last Updated 13 ಮೇ 2025, 10:21 IST
ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿ ಸದಸ್ಯರು ನಗರದ ರೈಲು ನಿಲ್ದಾಣದ ಬಳಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು –ಪ್ರಜಾವಾಣಿ ಚಿತ್ರ 
ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿ ಸದಸ್ಯರು ನಗರದ ರೈಲು ನಿಲ್ದಾಣದ ಬಳಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು –ಪ್ರಜಾವಾಣಿ ಚಿತ್ರ    

ಮೈಸೂರು: ‘ರಾಜ್ಯ ಸರ್ಕಾರ 473 ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸಿದೆ’ ಎಂದು ಆರೋಪಿಸಿ, ಸರ್ಕಾರಿ ಶಾಲೆಗಳ ಉಳಿವಿಗೆ ಕ್ರಮವಹಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿ ಸದಸ್ಯರು ನಗರದ ರೈಲು ನಿಲ್ದಾಣದ ಬಳಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್‌ ಬೆಟ್ಟದಕೊಪ್ಪ ಮಾತನಾಡಿ, ‘ಕಡಿಮೆ ದಾಖಲಾತಿ ನೆಪವೊಟ್ಟಿ 6,200ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ನಡುವೆಯೇ ಸರ್ಕಾರ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಿದೆ’ ಎಂದು ದೂರಿದರು.

‘ಮೂಲಸೌಕರ್ಯಗಳಿಂದ ಸೊರಗಿರುವ ಶಾಲೆಗಳಲ್ಲಿ ಮುಖ್ಯಶಿಕ್ಷಕರನ್ನೂ ಒಳಗೊಂಡಂತೆ ಒಬ್ಬಿಬ್ಬ ಶಿಕ್ಷಕರು ಮಾತ್ರ ಇರುತ್ತಾರೆ. 50 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿ ಮಾಡಿಲ್ಲ’ ಎಂದರು. 

ADVERTISEMENT

‘ಕಳೆದ ಆರು ವರ್ಷದಲ್ಲಿ 3,378 ಖಾಸಗಿ ಶಾಲೆಗಳಿಗೆ ಸರ್ಕಾರ ಪರವಾನಗಿ ನೀಡಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನದಿಂದ ಹಿಂದೆ ಸರಿಯಬೇಕು. ದಿನಗೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕರ ಮತ್ತು ಬಡ ರೈತರ ಮಕ್ಕಳು ಓದಲು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು’ ಎಂದು ಒತ್ತಾಯಿಸಿದರು. 

ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ದಿಶಾ ,ಅಂಜಲಿ,  ಕಾರ್ಯಕರ್ತರಾದ ದೀಕ್ಷಾ, ಆರತಿ, ಪ್ರಿಯಾಂಕಾ, ಚೈತ್ರಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.