ADVERTISEMENT

ಎಸ್‌ಐಆರ್‌: ಹಕ್ಕು ಕಸಿದುಕೊಳ್ಳುವ ಹುನ್ನಾರ – ಎಸ್‌ಡಿಪಿಐ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 13:44 IST
Last Updated 13 ಫೆಬ್ರುವರಿ 2026, 13:44 IST
   

ಮೈಸೂರು: ‘ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ದೇಶದ ಜನರ ಮೇಲೆ ಮಾಡಿರುವ ಪ್ರಹಾರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ, ಕೇರಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ರೀತಿ ನಿರ್ಣಯ ಅಂಗೀಕರಿಸಬೇಕು’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದ ಈ ಕ್ರಮ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದು ಆತಂಕ ಹಾಗೂ ತಳಮಳ ಸೃಷ್ಟಿಸಿದೆ. ಇದು ಚುನಾವಣಾ ವೇಳೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ. ಬದಲಾಗಿ ಯಾರು ಬೇಕಾದರೂ ಯಾರ ಬಗ್ಗೆಯಾದರೂ ಅರ್ಜಿ ನೀಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಮಾಡಬಹುದಾಗಿದೆ’ ಎಂದು ದೂರಿದರು.

‘ಪಶ್ಚಿಮ ಬಂಗಾಳದಲ್ಲಿ 250 ಬಿಜೆಪಿ ಕಾರ್ಯಕರ್ತರು, 15 ಸಾವಿರ ಮುಸ್ಲಿಮರ ಹೆಸರು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಹೀಗೆ 3ನೇ ವ್ಯಕ್ತಿಗೆ ಈ ಅಧಿಕಾರ ಚುನಾವಣಾ ಆಯೋಗ ಏಕೆ ನೀಡಿತು’ ಎಂದು ಪ್ರಶ್ನಿಸಿದರು.

ADVERTISEMENT

ದೌರ್ಜನ್ಯ:

‘ನೂತನ ಪ್ರಕ್ರಿಯೆಯಿಂದಾಗಿ ಆದಿವಾಸಿಗಳು, ವಲಸೆ ಕಾರ್ಮಿಕರು ಮೊದಲಾದವರಿಗೆ ಸಮಸ್ಯೆ ಉಂಟಾಗಲಿದೆ. ಎಸ್‌ಐಆರ್‌ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರ ಕೋಟ್ಯಂತರ ಮತದಾರರ ಮೇಲೆ ದಾಖಲೆ ಸಲ್ಲಿಸಿ ‘ಪೌರತ್ವ ಸಾಬೀತುಪಡಿಸಿ’ ಎಂದು ದೌರ್ಜನ್ಯ ನಡೆಸುತ್ತಿದೆ. ಇದು ಕೇವಲ ಮತದಾರರಪಟ್ಟಿ ಪರಿಷ್ಕರಣೆಯಷ್ಟೇ ಅಲ್ಲ, ನಾಗರಿಕತ್ವ ಪರಿಷ್ಕರಣೆಯಾಗಿದೆ’ ಎಂದು ಆರೋಪಿಸಿದರು.

‘ಆಯೋಗ ಕೇಳುವ ದಾಖಲೆಗಳು ಸಾಮಾನ್ಯ ಜನರ ಬಳಿ ಇರುವುದಿಲ್ಲ ಮತ್ತು ಇರುವುದನ್ನು ಒಪ್ಪುತ್ತಿಲ್ಲ. ಇದು ಸಂವಿಧಾನದ ಅನುಚ್ಛೇದ 326ರಡಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಖಚಿತವಾದ ಮತದಾನ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ದೂರಿದರು.

ಷಡ್ಯಂತ್ರ:

‘ಜನಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಚುನಾವಣಾ ಸಿಬ್ಬಂದಿ ಮನೆಗೆ ತೆರಳಿ ಅರ್ಹ ಮತದಾರರನ್ನು ಗುರುತಿಸಬೇಕು. ಆದರೆ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರೇ ದಾಖಲೆ ಸಲ್ಲಿಸಿ ಸಾಬೀತುಪಡಿಸಬೇಕು ಎನ್ನುವುದು ಅನ್ಯಾಯ. ಇದು ಸರ್ಕಾರವೇ ಮತದಾರರನ್ನು ಆಯ್ಕೆ ಮಾಡುವ ಷಡ್ಯಂತ್ರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಿವೆ. ಬಹುತೇಕ ಬೂತ್ ಲೆವಲ್ ಆಫೀಸರ್‌ಗಳಿಗೆ ತರಬೇತಿ ಇಲ್ಲ, ಆ್ಯಪ್ ಬಳಕೆಯ ತಿಳಿವಳಿಕೆ ಇಲ್ಲದ ಕಾರಣ ಮತದಾರರು ಗೊಂದಲ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅನೇಕ ಕಡೆ ತಪ್ಪು ಮ್ಯಾಪಿಂಗ್ ನಡೆದಿದೆ’ ಎಂದು ಆರೋಪಿಸಿದರು.

ಪದಾಧಿಕಾರಿಗಳಾದ ಅಮ್ಜದ್ ಖಾನ್, ರಫತ್‌ಖಾನ್, ಶಫಿ, ಎಸ್.ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.