ಮೈಸೂರು: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಹುಟ್ಟಿದ್ದು ಹಾಸನವಾದರೂ ಅವರ ಶಿಕ್ಷಣ ಹಾಗೂ ವೃತ್ತಿಯ ಬಹು ವರ್ಷ ಹಾಗೂ ನಿವೃತ್ತಿಯ ಜೀವನವನ್ನು ಸಾಂಸ್ಕೃತಿಕ ನಗರಿಯಲ್ಲೇ ಕಳೆದಿದ್ದರು.
1945ರಲ್ಲಿ ತಾಯಿಯನ್ನು ಕಳೆದುಕೊಂಡ ನಂತರ ಶಿಕ್ಷಣ ಪಡೆಯಲು ಮೈಸೂರಿಗೆ ಬಂದ ಅವರು, ಕೆಲವು ದಿನ ನಾರಾಯಣ ಶಾಸ್ತ್ರಿ ರಸ್ತೆಯ ಅನಾಥಾಲಯ ಹಾಗೂ ಹೊಯ್ಸಳ ಕರ್ನಾಟಕ ಸಂಘದ ಆಶ್ರಯ ಪಡೆದಿದ್ದರು. ಹಲವು ಮನೆಗಳಲ್ಲಿ ವಾರಾನ್ನದ ವಿದ್ಯಾರ್ಥಿಯಾಗಿ ಕೃಷ್ಣಮೂರ್ತಿಪುರಂನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದರು.
ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿದ್ದ ಅವರು 13ನೇ ವಯಸ್ಸಿನಲ್ಲಿ ಹೆಂಡದ ಲಾರಿಗಳನ್ನು ತಡೆದು ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದರು. ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ 2 ದಶಕ ಸೇವೆ ಸಲ್ಲಿಸಿದ್ದ ಅವರು, 70ರ ದಶಕದ ನಂತರ ಬಂದ ಎಲ್ಲ ಕಾದಂಬರಿಗಳು ರಚನೆಯಾಗಿದ್ದು ಇಲ್ಲಿಯೇ.
ಕುವೆಂಪುನಗರದ ಉದ್ಯಾನಗಳಲ್ಲಿ ವಾಯುವಿಹಾರ ಮಾಡುತ್ತಿದ್ದರು. ಪುಸ್ತಕ ಬಿಡುಗಡೆ ಸೇರಿದಂತೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ನಿಧನಕ್ಕೆ ಇಲ್ಲಿನ ಲೇಖಕರು ಕಲಾಸಕ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಒಡನಾಟದ ನೆನಪನ್ನು ಅವರ ಆಪ್ತರು, ಒಡನಾಡಿಗಳು ‘ಪ್ರಜಾವಾಣಿ’ ಜೊತೆ ತೆರೆದಿಟ್ಟಿದ್ದಾರೆ.
‘ನೆರೆಮನೆಯ ಗೆಳೆಯರು’
‘ಜನಪ್ರಿಯ ಕಾದಂಬರಿಕಾರರಾದ ಅವರು, ನನ್ನ ನೆರೆಮನೆಯ ಗೆಳೆಯರು. ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳು, ಪಡೆದ ಅನುಭವಗಳನ್ನು ವೈವಿಧ್ಯಮಯ ಕೃತಿಗಳಾಗಿಸಿದ್ದಾರೆ. ಅಮರವಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸುತ್ತಾರೆ ಲೇಖಕ ಪ್ರೊ.ಕೆ.ಎಸ್.ಭಗವಾನ್.
‘ನಮ್ಮ ನಡುವೇನೂ ಭಿನ್ನಾಭಿಪ್ರಾಯವಿರಲಿಲ್ಲ. ಸ್ಮೇಹಿತರಾಗಿದ್ದೆವು. ನಮ್ಮ ಮನೆಗೆ ಅವರು, ಅವರ ಮನೆಗೂ ನಾನೂ ಹೋಗಿ ಕ್ಷೇಮ– ಕುಶಲ, ಚರ್ಚೆ ನಡೆಸುವುದು ನಡೆದಿತ್ತು. ಪ್ರೀತಿಯಿಂದ ಮಾತನಾಡುತ್ತಿದ್ದರು. ಮತ್ತೆ ಮತ್ತೆ ನೋಡಬೇಕೆನ್ನುವ ಭಾವ ಮೂಡಿಸುವ ನಡವಳಿಕೆ ಅವರದ್ದಾಗಿತ್ತು. ಶತಾಯುಷಿಗಳಾಗಬೇಕಿತ್ತು. ಆತ್ಮೀಯ ಸ್ನೇಹಿತರೊಬ್ಬರನ್ನು ಕಳೆದುಕೊಂಡ ದುಃಖ ನನ್ನದು’ ಎಂದರು.
‘ಪರ್ವ’ ಪ್ರಯೋಗಕ್ಕೆ ಖುಷಿ ಪಟ್ಟಿದ್ದರು’
‘ರಂಗಾಯಣಕ್ಕೆ ಬಿ.ವಿ.ಕಾರಂತರು ಇದ್ದಾಗ ಬಂದಿದ್ದ ಎಸ್.ಎಲ್.ಭೈರಪ್ಪ ಅವರು 32 ವರ್ಷದ ನಂತರ ಅವರದೇ ಕಾದಂಬರಿ ‘ಪರ್ವ’ ಮಹಾ ರಂಗ ಪ್ರಯೋಗ ಕಂಡಾಗ ನೋಡಿ ಬೆನ್ನು ತಟ್ಟಿದ್ದರು’ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸ್ಮರಿಸಿದರು. ‘ಎಡಪಂಥೀಯ ಹೃದಯ ಶೂನ್ಯ ನಿರ್ದೇಶಕರು ರಂಗಾಯಣದಿಂದ ಅವರನ್ನು ದೂರವಿಟ್ಟಿದ್ದರು. ನನ್ನ ಅವಧಿಯಲ್ಲಿ ‘ಕುಸುಮಬಾಲೆ’ ನಾಟಕ ಮಾಡಿಸಿದ್ದೆ ಪರ್ವವನ್ನೂ ಪ್ರಯೋಗವಾಗಿಸಿದ್ದೆ. ರಂಗಾಯಣ ಎಲ್ಲರ ತಾಣವಾಗಿಸಿದ್ದೆ’ ಎಂದರು. ‘ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ 62 ಪ್ರದರ್ಶನವನ್ನು ಪರ್ವ ಕಂಡಿದೆ. 2020ರಲ್ಲಿ ರಾಜ್ಯ ಸರ್ಕಾರವೇ ಈ 9 ಗಂಟೆಗಳ ನಾಟಕಕ್ಕೆ ₹ 1 ಕೋಟಿ ಅನುದಾನ ನೀಡಿತ್ತು. ನಾಲ್ಕೈದು ಬಾರಿ ರಂಗಾಯಣಕ್ಕೆ ಬಂದಿದ್ದ ಅವರು ಕೃತಿಕಾರರಾಗಲ್ಲದೇ ನಾಟಕ ನೋಡಿ ಮೆಚ್ಚಿಕೊಂಡಿದ್ದರು. ನೇರ ನಿಷ್ಠುರವಾಗಿ ವಿಮರ್ಶಿಸಿದ್ದರು. ಪ್ರತಿ ಪಾತ್ರಧಾರಿಯನ್ನೂ ಕರೆದು ಮಾತನಾಡಿಸಿದ್ದರು’ ಎಂದರು. ‘ನನ್ನ ‘ಟಿಪ್ಪು ನಿಜಕನಸುಗಳು’ ‘ಕರಿನೀರ ವೀರ’ ನಾಟಕ ಕೃತಿಗಳಿಗೆ ಮುನ್ನುಡಿ ಬರೆದಿದ್ದರು. ತಂದೆಯಂತೆ ವಾತ್ಸಲ್ಯ ತೋರಿದ್ದರು. ವ್ಯಕ್ತಿತ್ವ ಮತ್ತು ಬರಹ ಒಂದೇ ಆಗಿತ್ತು. ತಮ್ಮ ಚಾರಿತ್ರಿಕ ನೋವುಗಳನ್ನು ಹೇಳಿಕೊಂಡಿದ್ದರು’ ಎಂದು ಭಾವುಕರಾದರು.
‘ಸಂಘಕ್ಕೆ ಕೊಡುಗೆ ಅಪಾರ’
‘ನಾರಾಯಣ ಶಾಸ್ತ್ರೀ ರಸ್ತೆಯ ಹೊಯ್ಸಳ ಕರ್ನಾಟಕ ಸಂಘಕ್ಕೆ ಶತಮಾನದ ಇತಿಹಾಸವಿದೆ. ಎಸ್.ಎಲ್.ಭೈರಪ್ಪ ಪ್ರೌಢಶಾಲೆ ಹಾಗೂ ಪದವಿ ಓದುವಾಗ ಸಂಘದ ವಿದ್ಯಾರ್ಥಿ ನಿಲಯದಲ್ಲಿದ್ದರು. ಸಮುದಾಯದವರೊಬ್ಬರು ವಿಶ್ವ ಪ್ರಸಿದ್ಧಿ ಪಡೆದದ್ದು ಇಲ್ಲಿದ್ದುಕೊಂಡು ಶಿಕ್ಷಣ ಪಡೆದದ್ದು ಸಂಘದ ಹೆಮ್ಮೆ’ ಎಂದು ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಹೇಳಿದರು. ‘ಸಂಘದ ಬೆಳವಣಿಗೆಗೆ ಶ್ರಮಿಸಿದ ಅವರು ಧರ್ಮದರ್ಶಿಯಾಗಿ ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಪ್ರೀತಿಯ ಹಳೆಯ ವಿದ್ಯಾರ್ಥಿಯಾಗಿ ಮಕ್ಕಳ ಶಿಕ್ಷಣಕ್ಕೆ ನೆರವದರು. ಅವರನ್ನು ನೆನೆಯದ ದಿನವಿಲ್ಲ. ಅವರ ಸಾಹಿತ್ಯ ಎಂದಿಗೂ ಜೀವಂತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.