ADVERTISEMENT

‘ಪರ್ವ’: ಹೊರ ರಾಜ್ಯ ಪ್ರವಾಸ

ವಿವಿಧೆಡೆ ನಾಟಕ ಪ್ರದರ್ಶನಕ್ಕೆ ಚಿಂತನೆ: ಕೇಂದ್ರಕ್ಕೆ ಮೊರೆ

ಡಿ.ಬಿ, ನಾಗರಾಜ
Published 22 ಮಾರ್ಚ್ 2021, 19:31 IST
Last Updated 22 ಮಾರ್ಚ್ 2021, 19:31 IST
ಪರ್ವ ನಾಟಕದ ದೃಶ್ಯ
ಪರ್ವ ನಾಟಕದ ದೃಶ್ಯ   

ಮೈಸೂರು: ಸಾಹಿತಿ ಎಸ್‌.ಎಲ್‌.ಭೈರಪ್ಪ ರಚಿತ ‘ಪರ್ವ’ ಕಾದಂಬರಿಯ ರಂಗ ಪ್ರದರ್ಶನ ಶುರುವಾದ ಬೆನ್ನಿಗೇ, ಹೊರ ರಾಜ್ಯಗಳಲ್ಲಿ ‘ಪರ್ವ’ ಪ್ರದರ್ಶನಕ್ಕೆ ಮೈಸೂರು ರಂಗಾಯಣ ಚಿಂತನೆ ನಡೆಸಿದೆ.

ಹೊರ ರಾಜ್ಯಗಳಲ್ಲಿರುವ ಕನ್ನಡ ಸಂಘಗಳ ಮೂಲಕ ನಾಟಕ ಪ್ರದರ್ಶನಕ್ಕೆ ರಂಗಾಯಣ ಆಲೋಚಿಸಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರದಿಂದ ₹ 2 ಕೋಟಿ ಅನುದಾನ ಪಡೆಯಲು ಪ್ರಸ್ತಾವ ಸಲ್ಲಿಸಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

‘ಹೊರ ರಾಜ್ಯಗಳಲ್ಲೂ ಕನ್ನಡ ಭಾಷೆಯಲ್ಲಿ ‘ಪರ್ವ’ ನಾಟಕ ಪ್ರದರ್ಶಿಸುವ ಆಶಯ ಮೈಸೂರು ರಂಗಾಯಣದ್ದು. ಇದಕ್ಕಾಗಿ ಪ್ರಕ್ರಿಯೆ ಆರಂಭಿಸಿದ್ದೇವೆ. ಕೇಂದ್ರದ ಅನುದಾನ ದೊರೆತರೆ ಅಕ್ಟೋಬರ್‌ ನಂತರ ಪ್ರವಾಸ ಕೈಗೊಳ್ಳಲಿದ್ದೇವೆ. ಅದಕ್ಕೆ ಬೇಕಿರುವ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೊರ ರಾಜ್ಯದಲ್ಲಿ ‘ಪರ್ವ’ ಕನ್ನಡ ಭಾಷೆಯಲ್ಲೇ ಪ್ರದರ್ಶನಗೊಳ್ಳುವಾಗ, ಆ ದೃಶ್ಯಕ್ಕೆ ಸಂಬಂಧಿಸಿದ ಸಾರಾಂಶ 90 ಡಿಗ್ರಿ ಕಣ್ಣಳತೆಯ ಸ್ಕ್ರೀನ್‌ನಲ್ಲಿ ಪ್ರೇಕ್ಷಕರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಗೋಚರಿಸಲಿದೆ. ಇದಕ್ಕೆ ಬೇಕಾಗಿರುವ ಸಿದ್ಧತೆಯೂ ನಡೆದಿದೆ’ ಎಂದರು.

‘ಪರ್ವ’ ಪರ್ಯಟನೆ: ‘ಪರ್ವ’ ನಾಟಕ ಪ್ರದರ್ಶನಕ್ಕಾಗಿಯೇ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹ 1 ಕೋಟಿ ಅನುದಾನ ಮೀಸಲಿಟ್ಟಿದೆ. ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ನಾಟಕ ಪ್ರದರ್ಶಿಸಬೇಕು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದರಂತೆ ಜೂನ್‌ ಅಂತ್ಯದಿಂದ ಮೈಸೂರು ರಂಗಾಯಣ ‘ಪರ್ವ ಪರ್ಯಟನೆ’ ನಡೆಸಲಿದೆ ಎಂದು ಹೇಳಿದರು.

‘ಮೈಸೂರಿನ ರಂಗಾಯಣದ ಆವರಣದಲ್ಲೇ ಕನಿಷ್ಠ 20 ಪ್ರದರ್ಶನ ನಡೆಯಲಿದೆ. ರಾಜ್ಯದ ವಿವಿಧೆಡೆ 30 ಪ್ರದರ್ಶನ ನೀಡುವ ಆಲೋಚನೆಯಿದೆ. ಒಂದೊಂದು ಕಡೆ ಮೂರು ದಿನ ಕ್ಯಾಂಪ್‌ ಮಾಡಲಿದ್ದು, ಎರಡು ಪ್ರದರ್ಶನ ನಡೆಸಲಿದ್ದೇವೆ. 50 ಜನರನ್ನೊಳಗೊಂಡ ತಂಡ ಪರ್ವ ಪರ್ಯಟನೆ ಕೈಗೊಳ್ಳಲಿದೆ’ ಎಂದು ತಿಳಿಸಿದರು.

***

ಪರ್ವ ಪರ್ಯಟನೆಗೂ ಮುನ್ನ ನಾಟಕ ಪ್ರದರ್ಶನಕ್ಕೆ ಯಾವ ರಂಗಮಂದಿರ ಸೂಕ್ತ ಎಂಬುದನ್ನು ಪರಿಶೀಲಿಸಲು ತಂತ್ರಜ್ಞರೊಬ್ಬರ ಜೊತೆ ರಾಜ್ಯ ಪ್ರವಾಸ ನಡೆಸುವೆ.

- ಅಡ್ಡಂಡ ಕಾರ್ಯಪ್ಪ, ನಿರ್ದೇಶಕ, ಮೈಸೂರು ರಂಗಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.