ADVERTISEMENT

ಸಿದ್ದರಾಮಯ್ಯ ಕಾಂಗ್ರೆಸ್ ಸೇರುವಲ್ಲಿ S.M.ಕೃಷ್ಣ ಪಾತ್ರ ಪ್ರಮುಖ: ಎಚ್.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 16:21 IST
Last Updated 22 ಡಿಸೆಂಬರ್ 2024, 16:21 IST
ಕೆ.ಆರ್.ನಗರ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ನುಡಿನಮನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಉದ್ಘಾಟಿಸಿದರು. ಸಾ.ರಾ.ಮಹೇಶ್, ಕೆ.ಎನ್.ಬಸಂತ್, ಎ.ಎಸ್.ಚನ್ನಬಸಪ್ಪ, ಚಂದ್ರಶೇಖರ್, ಎ.ಟಿ.ಸೋಮಶೇಖರ್ ಭಾಗವಹಿಸಿದ್ದರು
ಕೆ.ಆರ್.ನಗರ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ನುಡಿನಮನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಉದ್ಘಾಟಿಸಿದರು. ಸಾ.ರಾ.ಮಹೇಶ್, ಕೆ.ಎನ್.ಬಸಂತ್, ಎ.ಎಸ್.ಚನ್ನಬಸಪ್ಪ, ಚಂದ್ರಶೇಖರ್, ಎ.ಟಿ.ಸೋಮಶೇಖರ್ ಭಾಗವಹಿಸಿದ್ದರು   

ಕೆ.ಆರ್.ನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವಲ್ಲಿ ಎಸ್.ಎಂ.ಕೃಷ್ಣ ಅವರ ಪಾತ್ರ ಪ್ರಮುಖವಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಇಲ್ಲಿನ ಶ್ರೀಕೃಷ್ಣ ಮಂದಿರದಲ್ಲಿ ಭಾನುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ಪಕ್ಷ ಸೇರ್ಪಡೆ ಪ್ರಸ್ತಾವ ಸೋನಿಯಾ ಗಾಂಧಿ ಮುಂದಿಟ್ಟಾಗ ಮೊದಲು ತಿರಸ್ಕರಿಸಿದ್ದರು. ಎಸ್.ಎಂ.ಕೃಷ್ಣ ಅವರು ತಮ್ಮ ಮಾತಿನಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ವಿವರಿಸುತ್ತಿದ್ದಂತೆ ಸೋನಿಯಾ ಗಾಂಧಿ ಪಕ್ಷ ಸೇರ್ಪಡೆಗೆ ಒಪ್ಪಿಕೊಂಡರು. ಅಂತಹವರನ್ನು ಸಿದ್ದರಾಮಯ್ಯ ಯಾವತ್ತೂ ಮರೆಯಬಾರದು ಎಂದು ಹೇಳಿದರು.

ADVERTISEMENT

ಡಿ.ದೇವರಾಜ ಅರಸು ಅವರಂತೆ ಎಸ್.ಎಂ.ಕೃಷ್ಣ ಅವರೂ ಅಪರೂಪದ ನಡವಳಿಕೆ ಹೊಂದಿದ್ದರು. ಅವರ ಅವಧಿಯಲ್ಲಿ ಸ್ತ್ರೀ ಶಕ್ತಿ, ಯಶಸ್ವಿನಿ ಯೋಜನೆ, ಶಿಕ್ಷಣ, ಆರೋಗ್ಯ, ಐಟಿ ಬಿಟಿ ಸೇರಿದಂತೆ ಇಂತಹ ಸಾಕಷ್ಟು ಕ್ಷೇತ್ರಗಳಲ್ಲಿ ಕೆಲಸಗಳಾಗಿವೆ. ಜನತಂತ್ರ ವ್ಯವಸ್ಥೆಯಲ್ಲಿ ಜನ ಸರ್ಕಾರಕ್ಕೆ ಪಾಠ ಮಾಡುತ್ತಲೇ ಇರುತ್ತಾರೆ. ಅದನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಸಾ.ರಾ.ಮಹೇಶ್ ಮತ್ತು ನಾನು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಮಾತನಾಡಿ, ದಿ.ಎಸ್.ಎಂ.ಕೃಷ್ಣ ಅವರು ನಾಡಿನ ದೊರೆ ಮತ್ತು ಸೇವಕ ಎರಡೂ ಆಗಿದ್ದರು. ಅವರಲ್ಲಿ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ಇತ್ತು ಎಂದು ತಿಳಿಸಿದರು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ಮುಖಂಡರಾದ ಎ.ಎಸ್.ಚನ್ನಬಸಪ್ಪ, ಎಂ.ಟಿ.ಕುಮಾರ್, ಎ.ಟಿ.ಸೋಮಶೇಖರ್, ಹೆಗ್ಗಂದೂರು ಪ್ರಭಾಕರ್, ಎಸ್.ಪಿ.ಆನಂದ್, ಎಂ.ಟಿ.ಅಣ್ಣೇಗೌಡ ಮಾತನಾಡಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೆ.ಆರ್.ನಗರ ತಾಲ್ಲೂಕು ಘಟಕದ ಅಧ್ಯಕ್ಷ ಹಂಪಾಪುರ ಕುಮಾರ್, ಸಾಲಿಗ್ರಾಮ ತಾಲ್ಲೂಕು ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ, ವಕ್ತಾರ ಕೆ.ಎಲ್.ರಮೇಶ್, ಪುರಸಭೆ ಸದಸ್ಯ ಉಮೇಶ್, ಗ್ರಾ.ಪಂ ಅಧ್ಯಕ್ಷೆ ದಾಕ್ಷಾಯಿಣಿ, ಡಾ.ಎನ್.ಡಿ.ಜಗನ್ನಾಥ್, ಕೃಷ್ಣ ಭಟ್, ರೂಪಾ ಸತೀಶ್, ಮೋಹನಕುಮಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.