ADVERTISEMENT

ಚನ್ನಾಜಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿ

ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಸೋಬಾನೆ ಕಲಾವಿದೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:06 IST
Last Updated 24 ಡಿಸೆಂಬರ್ 2025, 6:06 IST
ಚನ್ನಾಜಮ್ಮ 
ಚನ್ನಾಜಮ್ಮ    

ಮೈಸೂರು: ಜಾನಪದ ಕಲಾವಿದೆ ಸೋಬಾನೆ ಚನ್ನಾಜಮ್ಮ ಅವರು 2025ನೇ ಸಾಲಿನ  ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‌ಅಕಾಡೆಮಿಯು ಮಂಗಳವಾರ ಆಯ್ಕೆ ಘೋಷಿಸಿದೆ.

ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಚನ್ನಾಜಮ್ಮ ಅವರ ನಾಲಿಗೆಯಲ್ಲಿ ಸೋಬಾನೆ ಪದಗಳು ನಲಿಯುತ್ತವೆ. ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಕಾರ್ಯಗಳಿಗೆ ಸುತ್ತಲಿನ ಗ್ರಾಮಸ್ಥರಿಗೆ ಅವರ ಪದಗಳು ಬೇಕು.

ರಾಗಿ ಬೀಸುವುದು, ಕಳೆ ಕೀಳುವುದು ಸೇರಿದಂತೆ ಕೃಷಿ ಕಾಯಕ ಮಾಡುವಾಗ ಹಾಡುವ ಅವರು, ಮಲೆ ಮಹದೇಶ್ವರ, ಪಾರ್ವತಮ್ಮ, ಭೈರವೇಶ್ವರ, ವೆಂಕಟರಮಣ ಸೇರಿ ಎಲ್ಲ ದೇವರ ಹಾಡುಗಳನ್ನು ಹಾಡುತ್ತಾರೆ.

ADVERTISEMENT

ಆಕಾಶವಾಣಿಯಲ್ಲೂ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡಿರುವ ಅವರು, ದಸರೆ, ಸುತ್ತೂರು ಜಾತ್ರೆ, ರಾಮನಗರದ ಜಾನಪದ ಲೋಕ ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯಕ್ರಮ ನೀಡಿದ್ದಾರೆ. 

ತಮಗಿರುವ 7 ಕುಂಟೆ ಗದ್ದೆಯಲ್ಲಿ ಭತ್ತ ಬೆಳೆಯುವ ಅವರು, ಈಗಲೂ ಪತಿ ಸಿದ್ದಯ್ಯ ಅವರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. 2015–20ರ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅವರು, ಜನಸೇವೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. 

‘ಚಿಕ್ಕವಯಸ್ಸಿನಲ್ಲಿ ದೊಡ್ಡಮ್ಮ ಪುಟ್ಟನಂಜಮ್ಮ ಅವ್ರೇ ಪದ ಕಲಿಸಿದ್ರು. 30–35 ವರ್ಷದಿಂದ ಹಾಡುತ್ತಿದ್ದೇನೆ. ಕೂಲಿ ಮಾಡಿ, ಹಾಡಿ ಮಕ್ಕಳನ್ನು ಡಿಗ್ರಿ ಓದಿಸಿವ್ನಿ. ಈಗ ಪ್ರಶಸ್ತಿ ಕೊಟ್ಟಿರೋದಕ್ಕೆ ಸಂತೋಷ ಆಗುತ್ತಿದೆ’ ಎಂದು ಚನ್ನಾಜಮ್ಮ ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.