ಎಚ್.ಡಿ.ಕೋಟೆ/ಸರಗೂರು: ಶಿಕ್ಷಣದ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಿದೆ ಎಂದು ಉಪಮಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ತಾಲ್ಲೂಕಿನ ಸರಗೂರು ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಭಾನುವಾರ ಕೊವಿಡ್ ಕೇರ್ ಸೆಂಟರ್ ಉದ್ಘಾಟನೆ, ಆಕ್ಸಿಜನ್ ಘಟಕ ಮತ್ತು ಆದಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಿತ ವಿದ್ಯೆಯನ್ನು ಸಮಾಜಕ್ಕೆ ಅರ್ಪಿಸಿ ಗ್ರಾಮೀಣ ಭಾಗದ ಜನರ ಸೇವೆ ಮಾಡುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ವಿವೇಕಾನಂದ ಸಂಸ್ಥೆ ಮಾಡುತ್ತಿದೆ. ಶಿಕ್ಷಣ ಪಡೆದು ಸಮಾಜಮುಖಿಯಾಗದಿದ್ದರೆ ಶಿಕ್ಷಣ ವ್ಯರ್ಥವಾಗುತ್ತದೆ. ಮಕ್ಕಳನ್ನು ಕಲಿಕೆ ಹಂತದಲ್ಲೇ ಸಮಾಜಮುಖಿ ಗಳನ್ನಾಗಿಸುವಂಥ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಆದಿವಾಸಿಗಳು ಹೆಚ್ಚಾಗಿರುವ ಈ ತಾಲ್ಲೂಕಿನ ಅಭಿವೃದ್ಧಿಗಾಗಿ ಯುವ ಶಾಸಕ ಸಿ.ಅನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಅವರು ಉತ್ಸಾಹಿ ಶಾಸಕರಾಗಿದ್ದು, ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ನಗರ ಪ್ರದೇಶದಲ್ಲಿ ಆಸ್ಪತ್ರೆಗಳನ್ನು ಆರಂಭಿಸಿ ಹಣ ಮಾಡುವವರನ್ನು ನೋಡಿದ್ದೇವೆ. ಆದರೆ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಮತ್ತು ಶಾಲೆ ಆರಂಭಿಸಿ ಜನ ಸೇವೆ ಮಾಡುವ ಸಂಸ್ಥೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ತಾಲ್ಲೂಕಿನ 119 ಹಾಡಿಗಳ 22,000 ಜನರು ಹಾಗೂ ಹಿಂದುಳಿದ ಪ್ರದೇಶದ ಬಡಜನರಿಗೆ ಅಭಿವೃದ್ಧಿ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ತಾಲ್ಲೂಕಿನ 2.5 ಲಕ್ಷ ಜನರ ಪೈಕಿ 1.5 ಲಕ್ಷ ಜನ ಬಡವರೇ ಇರುವ ತಾಲ್ಲೂಕು ಇದಾಗಿದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಅಧ್ಯಕ್ಷ ಆರ್.ಬಾಲಸುಬ್ರಹ್ಮಣ್ಯಂ ಮಾತನಾಡಿ, ಎಲ್ ಅಂಡ್ ಟಿ ಸಂಸ್ಥೆಯಿಂದ 19 ಆಕ್ಸಿಜನ್ ಸೌಲಭ್ಯವುಳ್ಳ ₹ 45 ಲಕ್ಷ ವೆಚ್ಚದಲ್ಲಿ ಕೋವಿಡ್-19 ಸೆಂಟರ್ ಉದ್ಘಾಟನೆ ಮಾಡಲಾಗಿದೆ. ಮತ್ತೊಂದು ₹ 65 ಲಕ್ಷ ವೆಚ್ಚದಲ್ಲಿ ಕೇರ್ ಸೆಂಟರ್ ಆರಂಭವಾಗಲಿದ್ದು, ಆಮ್ಲ ಜನಕ ಉತ್ಪಾದನಾ ಘಟಕವೂ ಇಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಇದ್ದರೂ ಎಚ್.ಡಿ.ಕೋಟೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ. ಕೊರೊನಾ 3ನೇ ಅಲೆ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಾಸಕ ಸಿ.ಅನಿಲ್ ಕುಮಾರ್ ಮಾತನಾಡಿ, ಸರಗೂರು ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾತ್ರ ಆಗಿದ್ದು, ತಾಲ್ಲೂಕು ಕೇಂದ್ರಕ್ಕೆ ಬೇಕಿರುವ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಕೋರಿದರು.
ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ, ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಪದವಿ ಕಾಲೇಜುಗಳಿಗೆ ಹೆಚ್ಚಿನ ಕಟ್ಟಡ ಹಾಗೂ ಉಪನ್ಯಾಸಕರನ್ನು ನೇಮಿಸುವಂತೆ ಒತ್ತಾಯಿಸಿದರು.
ಎಲ್‌ಅಂಡ್‌ಟಿ ಕಂಪನಿಯ ಮುಖ್ಯಸ್ಥ ಅಮಿತ್ ಚಡ್ಡಾ ವಿಡಿಯೊ ಕಾನ್ಫರೆನ್ಸ್ ಮೂಲಕ ಶುಭಾಶಯ ಕೋರಿದರು.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕೆ.ಎಂ.ಪ್ರಭಾಕರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿಪಂ ಸಿಇಒ ಎಂ.ಎಂ.ಯೋಗೀಶ್, ಉದ್ಯಮಿ ಪ್ರಕಾಶ್ ಪ್ರಶಾಂತ್, ತಹಶೀಲ್ದಾರ್ ಎಸ್.ಎನ್.ನರಗುಂದ, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಡೆನಿಸ್ ಚೌಹಾಣ್, ತಾಲ್ಲೂಕು ಆರೋಗ್ಯ ಅಧಿಕಾರಿ ಟಿ.ರವಿಕುಮಾರ್ ಇದ್ದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಆದಿವಾಸಿ ಸಮುದಾಯದವರನ್ನು ಪ್ರೇರೇಪಿಸಲು ಸಮುದಾಯದ ಮುಖಂಡರಿಗೆ ಲಸಿಕೆ ಹಾಕಿಸುವ ಅಭಿಯಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.