
ಸುದ್ದಿಗೋಷ್ಠಿಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರು ಉಪವಲಯದ ಮುಖ್ಯಸಂಚಾಲಕಿ ಲಕ್ಷ್ಮೀಜಿ ಮಾತನಾಡಿದರು
ಮೈಸೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನವನ್ನು ಇಲ್ಲಿನ ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಖಾಲಿ ಜಾಗದಲ್ಲಿ ಫೆ.8ರಿಂದ 22ರವರೆಗೆ ಆಯೋಜಿಸಲಾಗಿದೆ.
‘ಮಹಾಶಿವರಾತ್ರಿ ಹಾಗೂ ಸಂಸ್ಥೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ‘ಜ್ಞಾನ–ವಿಜ್ಞಾನ–ದಿವ್ಯದರ್ಶನ ಮೇಳ’ವೂ ನಡೆಯಲಿದೆ’ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೈಸೂರು ಉಪವಲಯದ ಮುಖ್ಯಸಂಚಾಲಕಿ ಲಕ್ಷ್ಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಾದಕವಸ್ತು ಸೇವನೆ ವಿರುದ್ಧ ಜಾಗೃತಿ, ಮೈಂಡ್ ಸ್ಪಾ, ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರ ಪ್ರದರ್ಶನ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆಯ ಸಮಾಲೋಚನೆ, ಮೌಲ್ಯಗಳ ಪ್ರಯೋಗವನ್ನು ವಿವರಿಸುವ ಆಟಗಳು ಮತ್ತು ಧ್ಯಾನ ಶಿಬಿರ ಜರುಗಲಿದೆ. ಪ್ರತಿ ದಿನವೂ ಚಿಂತನ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರ ನೀಡಿದರು.
ಸಚಿವ ಮಹದೇವಪ್ಪ ಉದ್ಘಾಟನೆ: ‘ಫೆ.8ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮುಖ್ಯಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಆದಿಚುಂಚನಗಿರಿ ವಿವಿ ಕುಲಸಚಿವ ಸಿ.ಕೆ. ಸುಬ್ಬರಾಯ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘ಸಾಹಿತಿ ಕೆ.ಸಿ. ಶಿವಪ್ಪ ಹಾಗೂ ನೃತ್ಯ ಕಲಾವಿದೆ ವಸುಂಧರ ದೊರೆಸ್ವಾಮಿ ಅವರಿಗೆ ‘ಈಶ್ವರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.
‘ಫೆ. 11ರಂದು ಸಂಜೆ 6.30ಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ 60ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸುವರು. ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಟಿ.ಎಸ್. ಶ್ರೀವತ್ಸ, ಆರ್ಟ್ ಆಫ್ ಲಿವಿಂಗ್ ಮೈಸೂರು ಕೇಂದ್ರದ ಮುಖ್ಯಸ್ಥ ಸ್ವಾಮಿ ದಿವ್ಯಪಾದ ಭಾಗವಹಿಸುವರು’ ಎಂದರು.
‘ಫೆ.22ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸದ ಡಾ.ಸಿ.ಎನ್. ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ, ನಿವೃತ್ತ ಕುಲಪತಿ ಪ್ರೊ.ಇ.ಟಿ. ಸುಬ್ಬಯ್ಯ, ವಕೀಲ ಓ ಶ್ಯಾಂ ಭಟ್, ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಜಿ. ಹುನಗುಂದ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದ ಪ್ರಾಂಶುಪಾಲ ರಂಗನಾಥ್ ಇದ್ದರು.
ವಿಶ್ವ ಶಾಂತಿಗಾಗಿ ಧರ್ಮಸಭೆ 13ರಂದು
‘ಫೆ.13ರಂದು ಸಂಜೆ 6.30ಕ್ಕೆ ವಿಶ್ವ ಶಾಂತಿಗಾಗಿ ಧರ್ಮಸಭೆ ನಡೆಯಲಿದೆ. ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್, ಫ್ರಾನ್ಸಿಸ್ ಸೆರಾವೊ, ಸೂಫಿ ಮೊಹಮ್ಮದ್ ರುಹುಲ್ಲಾ ಶಾಹ್ ಖಾದ್ರಿ, ಹರ್‌ಪ್ರೀತ್ ಸಿಂಗ್ ಪಾಲ್ಗೊಳ್ಳುವರು’ ಎಂದು ಲಕ್ಷ್ಮೀಜಿ ತಿಳಿಸಿದರು.
‘ಫೆ.15ರಂದು ಸಂಜೆ 6.30ಕ್ಕೆ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಕಾವೇರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ದೀಪು ಆರ್., ಇಂಡಿಯಾ ಟಿಬೆಟ್ ಸಮನ್ವಯ ಕಚೇರಿಯ ಪ್ರಾದೇಶಿಕ ಸಂಯೋಜಕ ಜಯಪ್ರಕಾಶ್‌ರಾಜೇ ಅರಸ್, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ದೀಪಾ ಎಂ., ಉದ್ಯಮಿ ಅಶೋಕ್ ಗೋವಿಂದೇಗೌಡ, ಭಾರತ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ ಸ್ಥಾಪಕ ಮಹೇಂದ್ರ ಸಾಲಿಯಾನ್, ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.