ಮೈಸೂರು: ‘ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಆರೋಪದ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ದುರ್ಬಲಗೊಳಿಸುವುದನ್ನು ಖಂಡಿಸಿ, ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಆ.22ರಂದು ಬೆಳಿಗ್ಗೆ 10.30ಕ್ಕೆ ಭಾರತ ಭೀಮ್ ಸೇನೆಯಿಂದ ನಗರದ ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹತ್ಯೆ ನಡೆದು 13 ವರ್ಷಗಳಾಗಿದ್ದು, ಇನ್ನೂ ಸತ್ಯಾಂಶ ಹೊರ ಬಂದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಇದೇ ವೇಳೆ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ತಾನು ಬಹಳಷ್ಟು ಶವ ಹೂತಿರುವುದಾಗಿ ತಿಳಿಸಿದ ಕಾರಣ ಎಸ್‌ಐಟಿ ತನಿಖೆ ನಡೆಯುತ್ತಿದೆ. ಆದರೆ, ಈ ತನಿಖೆ ವಿರುದ್ಧ ಪ್ರಭಾವ ಬೀರುವ ಕೆಲಸವನ್ನು ಕೆಲ ಪಕ್ಷಗಳ ರಾಜಕೀಯ ಮುಖಂಡರು ಮಾಡುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ತಮಗೆಲ್ಲ ಗೌರವವಿದೆ. ಆದರೆ ಆರೋಪಗಳಿಂದ ಅದು ಹೊರಬರಬೇಕಾದ ಅಗತ್ಯವಿದೆ’ ಎಂದರು.
‘ಪಾದಯಾತ್ರೆಯಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ನಟ ಚೇತನ್ ಅಹಿಂಸಾ ಭಾಗವಹಿಸುವರು. ಇತರ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುತ್ತಿದ್ದು, ಅಂತಿಮವಾಗಿ ಎಲ್ಲ ಜಿಲ್ಲೆಯವರೂ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿ ಧರ್ಮಸ್ಥಳಕ್ಕೆ ಹೊರಡಲಾಗುವುದು’ ಎಂದರು.
ಭಾರತ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ಮಹದೇವಮ್ಮ, ಯಶವಂತ್, ನಾಗೇಶ್, ಬಸವಣ್ಣ, ರವಿಕುಮಾರ್ ಹಾಗೂ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.