
ಮೈಸೂರು: ‘ಮನುಷ್ಯನ ಸೇವೆಯಲ್ಲಿಯೇ ಧರ್ಮ ಮತ್ತು ಭಕ್ತಿ ಅಡಗಿದೆ’ ಎಂದು ಅವಧೂತ ದತ್ತ ಪೀಠ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಸಂತ ಸಮಾಗಮದಲ್ಲಿ ‘ಮಾನವನ ದೈವೀಕರಣವೇ ಧರ್ಮದ ಉದ್ದೇಶ ಮತ್ತು ಶಕ್ತಿ’ ವಿಷಯ ಕುರಿತು ಮಾತನಾಡಿ, ‘ಧರ್ಮವು ಬಹಳ ಸೂಕ್ಷ ಹಾಗೂ ನಿಗೂಢ, ಅದನ್ನು ಅರ್ಥ ಮಾಡಿಕೊಳ್ಳುವುದೇ ನಮ್ಮ ಸಾಧನೆ’ ಎಂದರು.
‘ಧರ್ಮದಲ್ಲಿ ಎಲ್ಲವೂ ಪ್ರತಿಷ್ಠಾಪನೆಯಾಗಿದೆ. ವ್ಯಕ್ತಿಯ ಬೆಳವಣಿಗೆ ಹಾಗೂ ಸಮಷ್ಟಿಯ ಅಭಿವೃದ್ಧಿ ಎರಡೂ ಅಗತ್ಯ. ಯಾವಾಗ ಸಮಾಜದಲ್ಲಿ ಧರ್ಮ ಕಳೆಗುಂದುತ್ತದೆಯೋ ಆಗೆಲ್ಲಾ ಮಹಾನ್ ಚೇತನಗಳು ಅವತರಿಸಿ ಮನುಕುಲದ ಸೇವೆ ಮೂಲಕ ಧರ್ಮ ಜಾಗೃತಗೊಳಿಸಿವೆ. ರಾಮಕೃಷ್ಣ ಪರಮಹಂಸರೂ ಅಂತಹ ಮಹಾನ್ ಸಂತ’ ಎಂದು ಸ್ಮರಿಸಿದರು.
‘ಧರ್ಮ ಅನುಸರಿಸುವ ಸುಲಭ ಮಾರ್ಗವೆಂದರೆ, ಕಷ್ಟದಲ್ಲಿರುವವರಿಗೆ ಅಗತ್ಯವಾದದ್ದನ್ನು ದಾನ ಮಾಡುವುದು. ಇಂಥ ಅನೇಕ ಧರ್ಮ ಕಾರ್ಯಗಳನ್ನು ಮಾಡುವ ಮೂಲಕ ಮನುಷ್ಯ ರಥವನ್ನು ಹತ್ತಿರುವ ನಾವೆಲ್ಲರೂ ದೈವ ರಥ ಹತ್ತಬೇಕಿದೆ’ ಎಂದು ಆಶಿಸಿದರು.
ಉತ್ತರಪ್ರದೇಶ ಬೃಂದಾವನದ ಉದಾಸೀನ್ ಕಾರ್ಷ್ಣಿ ಆಶ್ರಮ ಪೀಠಾಧೀಶ ಸ್ವಾಮಿ ಗುರುಶರಣಾನಂದ ಮಾತನಾಡಿ, ‘ಭಕ್ತಿಯ ಹೊರತಾಗಿ ಜ್ಞಾನ ಪ್ರಾಪ್ತಿ ಆಗುವುದಿಲ್ಲ. ಮನುಷ್ಯ ಮತ್ತು ಭಗವಂತನ ಸಂಬಂಧ ತಾಯಿ, ಮಗುವಿನಂತಿರಬೇಕು. ಮೋಕ್ಷ ಪಡೆಯಲು ಯಾವುದೋ ಹೊಸ ಮಾರ್ಗಕ್ಕಾಗಿ ಒದ್ದಾಡಬೇಡಿ, ತಾಯಿಯೊಂದಿಗಿನ ಸಂಬಂಧವನ್ನೇ ದೇವರೆಡೆಗೆ ಪರಿವರ್ತಿಸಿ. ಆ ಪ್ರೀತಿಯೇ ಧರ್ಮ, ಭಕ್ತಿ’ ಎಂದರು.
ಅರುಣಾಚಲ ಪ್ರದೇಶದ ನರೋತ್ತಮ್‌ನಗರದ ರಾಮಕೃಷ್ಣ ಮಿಷನ್‌ನ ಸ್ವಾಮಿ ಅಚ್ಯುತೇಶಾನಂದ ಮಾತನಾಡಿದರು.
ರಾಮಕೃಷ್ಣ ಮಿಷನ್ ಅಧ್ಯಕ್ಷ, ಬೇಲೂರು ಮಠದ ಸ್ವಾಮಿ ಗೌತಮಾನಂದ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.