
ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು. ರಾತ್ರಿ ಶಿವಸ್ಮರಣೆ ಹಾಗೂ ಜಾಗರಣೆಗೆ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.
ಬೆಳಗಿನ ಜಾವ 5 ಗಂಟೆಯಿಂದಲೇ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ದೇವರ ದರ್ಶನಕ್ಕಾಗಿ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಸಾಮಾನ್ಯ ದರ್ಶನಕ್ಕೆ ದೇವಾಲಯದ ಒಳಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಲವರು ₹100, ₹300 ದರದ ವಿಶೇಷ ದರ್ಶನದ ಟಿಕೆಟ್ ಪಡೆದು ದೇವಾಲಯದ ಒಳಪ್ರವೇಶಿಸಿದರು.
ಬೆಳಗಿನ ಜಾವ 4ರಿಂದಲೇ ದೇವಾಲಯದಲ್ಲಿ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಉಷಾಕಾಲದ ಪೂಜೆ ನೆರವೇರಿಸಿ, ಶ್ರೀಕಂಠೇಶ್ವರಸ್ವಾಮಿಗೆ ಗಂಧ, ಕುಂಕುಮ, ಅರಿಸಿನ, ಹಾಲು, ಮೊಸರು, ಎಳನೀರು ಸೇರಿದಂತೆ ಫಲಪಂಚಾಮೃತ ಅಭಿಷೇಕ ನೆರೆವೇರಿಸಲಾಯಿತು. ಶ್ರೀಕಂಠೇಶ್ವರಸ್ವಾಮಿಗೆ 11 ಬಾರಿ ರುದ್ರಪಾರಾಯಣ ಹಾಗೂ ಬೆಳಗಿನ ಅವಧಿಯಲ್ಲಿ ನಾಲ್ಕು ಜಾವದ ಅಭಿಷೇಕ ನಡೆಸಲಾಯಿತು. ದೇವಾಲಯದ ಒಳಾವರಣದಲ್ಲಿ ಶಿವನ ವಿವಿಧ ಅವತಾರಗಳನ್ನು ಪ್ರತಿಬಿಂಬಿಸುವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಿಲ್ವಾರ್ಚನೆ ನಡೆಸಲಾಯಿತು.
ಬೆಳಗಿನ ಉಪಾಹಾರ ವ್ಯವಸ್ಥೆಗೆ ಚಾಲನೆ
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಅವರು ಭಕ್ತರಿಗೆ ಬೆಳಗಿನ ತಿಂಡಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ದಾಸೋಹ ಭವನದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾತ್ರ ಇತ್ತು. ಇದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ದರ್ಶನದ ನಂತರ ಬೆಳಗಿನ ತಿಂಡಿ ವ್ಯವಸ್ಥೆ ಇರಲಿಲ್ಲ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ಜೊತೆಗೆ ವಿಶೇಷ ದಿನಗಳಂದು ರಾತ್ರಿ ಊಟವನ್ನು ಪ್ರಸಾದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯಸವ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಇಂಧನ್ ಬಾಬು ದೇವಾಲಯದ ಇಒ ಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.