ಮೈಸೂರು: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಗುತ್ತಿರುವ ಮಾನಸಿಕ ತೊಂದರೆ ಹಾಗೂ ಆರ್ಥಿಕ ವಂಚನೆಯನ್ನು ತಪ್ಪಿಸಬೇಕು’ ಎಂದು ಇಲ್ಲಿನ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜೆ. ಸುರೇಶ್ ಗೌಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
‘ಪ್ರಥಮ ಪಿಯು ಪ್ರವೇಶಾತಿಗೆ ಸಂಬಂಧಿಸಿದಂತೆ ದಿನಾಂಕ ಹಾಗೂ ಸುತ್ತೋಲೆ ಹೊರಡಿಸಬೇಕು. ಅನುದಾನ ಮತ್ತು ಅನುದಾನರಹಿತ ಪಿಯು ಕಾಲೇಜುಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬೇಕು’ ಎಂದು ಕೋರಿದ್ದಾರೆ.
‘ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲವು ಕಾಲೇಜುಗಳು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳನ್ನು, ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿವೆ. ಪೋಷಕರ ಮೊಬೈಲ್ ಫೋನ್ ಸಂಖ್ಯೆ ಪಡೆದು ಸಂಪರ್ಕಿಸಿ, ಸೀಟು ಬುಕ್ ಮಾಡುವಂತೆ ತಿಳಿಸುತ್ತಿವೆ. ಪ್ರಥಮ ಪಿಯು ತರಗತಿಗಳಿಗೆ ಪ್ರವೇಶಾತಿ ಹೆಸರಿನಲ್ಲಿ ಮುಂಗಡವಾಗಿ ಐದು ಅಥವಾ ಹತ್ತು ಸಾವಿರ ರೂಪಾಯಿ ಪಡೆದು ರಸೀದಿ ನೀಡದೇ ವಂಚಿಸುತ್ತಿವೆ’ ಎಂದು ದೂರಿದ್ದಾರೆ.
‘ಕೆಲವು ವಸತಿ ಕಾಲೇಜುಗಳು ಕೂಡ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುನ್ನ ಮತ್ತು ಫಲಿತಾಂಶಕ್ಕೆ ಮೊದಲೇ ಪ್ರವೇಶಾತಿ ಪ್ರಕ್ರಿಯೆಗಳನ್ನು ಆರಂಭಿಸುತ್ತಿವೆ. ಎಲ್ಲಿ ಸೀಟು ಸಿಗದೇ ಹೋದೀತೆಂದು ಆತಂಕಕ್ಕೆ ಒಳಗಾಗುವ ಪೋಷಕರು ಮುಂಚೆಯೇ ಪ್ರವೇಶ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ. ಇದನ್ನು ತಡೆಯಲು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.