ADVERTISEMENT

ಸರ್ಕಾರ ನಡೀತಾ ಇಲ್ಲ ಎಂದಿದ್ದ ಮಾಧುಸ್ವಾಮಿ ಹೇಳಿಕೆಗೆ ST ಸೋಮಶೇಖರ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 12:37 IST
Last Updated 14 ಆಗಸ್ಟ್ 2022, 12:37 IST
ಎಸ್.ಟಿ.ಸೋಮಶೇಖರ್‌
ಎಸ್.ಟಿ.ಸೋಮಶೇಖರ್‌   

ಮೈಸೂರು: ‘ಸರ್ಕಾರ ನಡೀತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಷ್ಟೇ’ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ತಿರುಗೇಟು ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನಾನೇ ಮೇಧಾವಿ, ನಾನೊಬ್ಬನೇ ಬುದ್ಧಿವಂತನೇ ಹೊರತು ಬೇರಾರೂ ಇಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ. ಅದನ್ನು ತಲೆಯಿಂದ ತೆಗೆದು ಹಾಕಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ಆ ಮೇಧಾವಿ ಹೇಳಿದಂತೆ ನಮ್ಮ ಸರ್ಕಾರ ಕುಂಟುತ್ತಿಲ್ಲ. ಬಹುಶಃ ಅವರು ನಿರ್ವಹಿಸುತ್ತಿರುವ ಸಣ್ಣ ನೀರಾವರಿ ಇಲಾಖೆಯು ಕುಂಟುತ್ತಿರಬಹುದು. ಆ ಬಗ್ಗೆ ಹೇಳಿರಬಹುದೇನೋ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಪ್ರತಿ ವಾರ ಸಚಿವ ಸಂಪುಟ ಸಭೆ ನಡೆಯುತ್ತದೆ. ಮಹತ್ವದ ನಿರ್ಣಯಗಳನ್ನು ಅಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಅದನ್ನು ಮಾಧ್ಯಮದ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಧುಸ್ವಾಮಿ ಅವರೇ ಮಾಡುತ್ತಿದ್ದಾರೆ. ಆಗ, ಸರ್ಕಾರ ನಡೆಯುತ್ತಿಲ್ಲದಿರುವುದು ಅವರಿಗೆ ಗೊತ್ತಿರಲಿಲ್ಲವೇ? ಅವರು ಹೇಳಿಕೆ ನೀಡಿರುವುದು ನಿಜವಾದಲ್ಲಿ ಅದು ತಪ್ಪು’ ಎಂದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಸರ್ಕಾರ ಚೆನ್ನಾಗಿ ನಡೆದಿತ್ತು. ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲೂ ಉತ್ತಮವಾಗಿದ್ದು, ಆ.28ಕ್ಕೆ ವರ್ಷದ ಸಾಧನೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಬಗ್ಗೆ ಯಾರೂ ಬೊಟ್ಟು ಮಾಡುವ ಅಗತ್ಯವಿಲ್ಲ’ ಎಂದು ಸಮರ್ಥಿಸಿಕೊಂಡರು.

‘ನಾನು ಹೇಳಿದ ಒಂದು ಕೆಲಸವನ್ನೂ ಮಾಡಿಕೊಟ್ಟಿಲ್ಲ ಎಂದು ಮಾಧುಸ್ವಾಮಿ ನನ್ನ ಬಗ್ಗೆ ಆರೋಪಿಸಿರುವುದು ಸರಿಯಲ್ಲ. ಸಚಿವರು ಹೇಳಿದ್ದಾರೆಂದು ಕಾನೂನು ಮೀರಿ ನೋಟಿಸ್ ಕೊಡಲಾಗದು. ಯಾರೋ ಒಬ್ಬರನ್ನು ಟಾರ್ಗೆಟ್ ಮಾಡಲಾಗದು. ತನಿಖೆ ನಡೆಸಿ, ತಪ್ಪಿತಸ್ಥರು ಎನ್ನುವುದು ದೃಢವಾದಾಗ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ತಿರುಗೇಟು ನೀಡಿದರು.

‘ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರನ್ನು ಹೊಂದಿದವಾಗಿವೆ. ಅವುಗಳ ಮೇಲೆ ಗದಾಪ್ರಹಾರ ಮಾಡಲಾಗದು. ದೂರು ಕೇಳಿಬಂದಲ್ಲಿ ತನಿಖೆ ನಡೆಸಬೇಕಾಗುತ್ತದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಬಂದ ದೂರು ಆಧರಿಸಿ, ತನಿಖೆ ನಡೆಸಿ ಕ್ರಮ ಜರುಗಿಸಲಾಗಿದೆ. ಅಂತೆಯೇ ಕೋಲಾರ, ತುಮಕೂರು ಡಿಸಿಸಿ ಬ್ಯಾಂಕ್ ಮೇಲಿನ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹೀಗಿರುವಾಗ ಸಚಿವರು ಹೇಳಿದರೆಂದು ಕಾನೂನು ಉಲ್ಲಂಘಿಸಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.