ADVERTISEMENT

ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 29 ಮೇ 2022, 7:03 IST
Last Updated 29 ಮೇ 2022, 7:03 IST
   

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾತಿಗೆ ತೂಕವಿತ್ತು. ಈಗ ಅವರ ಮಾತನ್ನು ಅವರ ಪಕ್ಷದ ಕಾರ್ಯಕರ್ತರೇ ಕೇಳುತ್ತಿಲ್ಲ. ಅವರ ಮಾತಿಗೆ ಕಿಮ್ಮತ್ತು ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಿರುವುದರಿಂದ ಆರ್‌ಎಸ್‌ಎಸ್‌, ಟೀಕಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ ಎಂದು ಇಲ್ಲಿ ಭಾನುವಾರ ಸುದ್ದಿಗಾರರಿಗೆ ಹೇಳಿದರು.

ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಬಗ್ಗೆ ಅಧ್ಯಯನ ಮಾಡಿಲ್ಲ. ಅವರಿಗೆ ಆ ಕುರಿತು ಕನಿಷ್ಠ ಜ್ಞಾನವೂ ಇಲ್ಲ. ಅವರನ್ನು ಒಮ್ಮೆ ಆರ್‌ಎಸ್‌ಎಸ್‌ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್‌ಎಸ್‌ಎಸ್‌ ಕುರಿತ ಪುಸ್ತಕ ನೀಡುತ್ತೇವೆ. ಆಗಲಾದರೂ ಅವರಿಗೆ ಆರ್‌ಎಸ್‌ಎಸ್‌ ಮಾಡುವ ಸಮಾಜಮುಖಿ ಕಾರ್ಯಗಳು ಅರ್ಥವಾಗಬಹುದು ಎಂದರು.

ADVERTISEMENT

ಕಳೆದ ಎರಡು ವರ್ಷಗಳಿಂದ ನಾನು ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಂಡಿದ್ದೇನೆ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದನ್ನು ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ. ಸದ್ಯದಲ್ಲೇ ಅವರಿಗೆ ಆರ್‌ಎಸ್‌ಎಸ್‌ ಕುರಿತ ಪುಸ್ತಕ ಕಳುಹಿಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಸುಮ್ಮನೇ ಟೀಕೆ ಮಾಡುವ ಬದಲು ವಿರೋಧ ಪಕ್ಷವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೀಕ್ಷಿಸಲಿ ಎಂದು ಸಲಹೆ ನೀಡಿದರು.

ವಿಶ್ವನಾಥ್ ಅವರು ಯಾವಾಗಲೂ ಸಲಹೆ ಕೊಡುತ್ತಿರುತ್ತಾರೆ. ಒಳ್ಳೆಯ ಅಂಶವನ್ನು ಸ್ವೀಕಾರ ಮಾಡಿ ಉಳಿದಿದ್ದನ್ನು ಬಿಡುತ್ತಾರೆ.
ಪಕ್ಷದ ಅಧ್ಯಕ್ಷರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಠ್ಯ ಪುಸ್ತಕ ಪರಿಷ್ಕರಣ ಸಂಬಂಧ ಸಚಿವ ನಾಗೇಶ್ ಅವರು ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಪಠ್ಯ ಪುಸ್ತಕಗಳನ್ನು ಯಾರೂ ಕೂಡ ಸರಿಯಾಗಿ ಓದದೇ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಪುಸ್ತಕ ಓದಲಿ.‌ ಕೇಸರಿಕರಣ ಬಗ್ಗೆ ಚರ್ಚೆ ಆಮೇಲೆ ಮಾಡಲಿ. ವಿಶ್ವನಾಥ್ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿರುವವರು ಹೀಗಾಗಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.