ADVERTISEMENT

ರಾಜ್ಯ ಬಜೆಟ್: ಮೈಸೂರಿಗರ ನಿರೀಕ್ಷೆ ಹಲವು

ನೀರಾವರಿ ಯೋಜನೆ. ಪ್ರವಾಸೋದ್ಯಮಕ್ಕೆ ಬೂಸ್ಟರ್‌ ಡೋಸ್‌ಗೆ ಬೇಡಿಕೆ

ಎಂ.ಮಹೇಶ
Published 6 ಫೆಬ್ರುವರಿ 2023, 11:05 IST
Last Updated 6 ಫೆಬ್ರುವರಿ 2023, 11:05 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮೈಸೂರು: ಇದೇ 17ರಂದು 2023–24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಜನರ ನಿರೀಕ್ಷೆಗಳು ಗರಿಗೆದರಿವೆ.

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ, ಮತ ಬೇಟೆಗೆ ಇಳಿಯಲಿರುವ ಹೊತ್ತಿನಲ್ಲಿ ಮೈಸೂರು ಭಾಗದ ಜನರ ಪ್ರೀತಿ ಗಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಕೊಡುಗೆ ನೀಡುವರೇ ಎಂಬ ನಿರೀಕ್ಷೆ ಜನರದ್ದಾಗಿದೆ. ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಬೇಕು ಎಂಬ ಕೂಗಿದೆ. ಪ್ರವಾಸೋದ್ಯಮಕ್ಕೆ ಬೂಸ್ಟರ್ ಡೋಸ್ ಕೊಡಬೇಕು ಎನ್ನುವುದು ಆ ವಲಯದವರ ಒತ್ತಾಯವಾಗಿದೆ.

ಮೈಸೂರು ನಗರ ದಿನೇ ದಿನೇ ಬೆಳೆಯುತ್ತಿದ್ದು, ಅದಕ್ಕ ತಕ್ಕಂತೆ ಮೂಲಸೌಲಭ್ಯಗಳನ್ನು ವೃದ್ಧಿಸುವ ಅಗತ್ಯವಿದೆ. ಇದಕ್ಕಾಗಿ ಮೈಸೂರು ಮಹಾನಗರಪಾಲಿಕೆಯನ್ನು ‘ಬೃಹತ್‌ ಮೈಸೂರು ಮಹಾನಗರಪಾಲಿಕೆ’ಯನ್ನಾಗಿ ಘೋಷಿಸಬೇಕು ಎಂಬ ಆಗ್ರಹ ಬಹಳ ವರ್ಷಗಳಿಂದಲೂ ಇದೆ. ಜನರ ಈ ಆಶಯಕ್ಕೆ ಮುಖ್ಯಮಂತ್ರಿ ಮಣೆ ಹಾಕುತ್ತಾರೆಯೇ ನೋಡಬೇಕಿದೆ.

ADVERTISEMENT

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ’ ತರಾತುರಿಯಲ್ಲಿ ನಡೆಸುವ ಬದಲಿಗೆ ಮುಂಚಿತವಾಗಿಯೇ ಸಿದ್ಧತೆ ಕೈಗೊಳ್ಳಬೇಕು, ದೇಶ–ವಿದೇಶದ ಪ್ರವಾಸಿಗರನ್ನು ಸೆಳೆಯಬೇಕು, ಇದಕ್ಕಾಗಿ ಪ್ರತ್ಯೇಕ ‍ಪ್ರಾಧಿಕಾರ ರಚನೆಯಾಗಬೇಕು ಎನ್ನುವ ಆಗ್ರಹ ದಶಕಗಳಿಂದಲೂ ಇದೆ. ಇದನ್ನು ಈ ಬಾರಿಯ ಬಜೆಟ್‌ನಲ್ಲಾದರೂ ಘೋಷಿಸಲಾಗುತ್ತದೆಯೇ ಎಂಬ ನಿರೀಕ್ಷೆ ಜನರದಾಗಿದೆ.

ಪ್ರಸಿದ್ಧ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟವನ್ನು ನೈಸರ್ಗಿಕವಾಗಿಯೇ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಸುಸ್ಥಿರ ಅಭಿವೃದ್ಧಿಗೆ ಮಾತ್ರವೇ ಆದ್ಯತೆ ಕೊಡಬೇಕು ಎನ್ನುವುದು ಪರಿಸರವಾದಿಗಳ ಕಾಳಜಿಯಾಗಿದೆ.

ಪ್ರವಾಸೋದ್ಯಮವನ್ನು ನಂಬಿರುವ ನಗರವೂ ಇದಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳಷ್ಟು ಅವಕಾಶಗಳಿವೆ. ವರ್ಷ ಪೂರ್ತಿ ಚಟುವಟಿಕೆಗಳು ಗರಿಗೆದರುವಂತೆ ಮಾಡಲು ವಿಶೇಷ ಯೋಜನೆ ಬೇಕಾಗಿದೆ.

ಮೈಸೂರು ರಫ್ತು ಕೇಂದ್ರಕ್ಕೆ ಕೇಂದ್ರ ಸರ್ಕಾರ ₹ 3, ರಾಜ್ಯ ಸರ್ಕಾರ ₹ 1 ಕೋಟಿ ಘೋಷಿಸಿದೆ. ಮೈಸೂರು ಕೈಗಾರಿಕೆಗಳ ಸಂಘದಿಂದ ₹ 50 ಲಕ್ಷ ಮತ್ತು ಜಮೀನು ಕೊಡಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಬಜೆಟ್‌ನಲ್ಲಿ ಹಣ ಒದಗಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವುದು ಕೈಗಾರಿಕಾ ವಲಯದ ಬೇಡಿಕೆಯಾಗಿದೆ.

ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ‍ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇನ್ನೂ ಸ್ವಂತ ನೆಲೆ ಹೊಂದುವುದು ಸಾಧ್ಯವಾಗಿಲ್ಲ. ಸಾತಗಳ್ಳಿಯಲ್ಲಿ ಮುಡಾದಿಂದ ಈಚೆಗೆ ಜಾಗ ದೊರೆತಿದ್ದು, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಶ್ಯವಾದ ಅನುದಾನ ನೀಡಬೇಕಾಗಿದೆ.

ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಅದರಲ್ಲೂ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಆಸ್ಪತ್ರೆ, ಕಾಲೇಜು ಮಂಜೂರು ಮಾಡಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂಬ ಕೂಗಿದೆ. ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು. ಗ್ರಾಮಾಂತರ ಬಸ್ ನಿಲ್ದಾಣವನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯೂ ಇದೆ.

ಕಬಿನಿ ಜಲಾಶಯದ ಬಳಿ ಕೆಆರ್‌ಎಸ್ ಬೃಂದಾವನ ಮಾದರಿ ಉದ್ಯಾನ ಅಭಿವೃದ್ಧಿಪಡಿಸಬೇಕು, ಪ್ರವಾಸಿಗರನ್ನು ಸೆಳೆಯುವಂತಾಗಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಗುವುದೇ ಎಂದು ಅಲ್ಲಿನ ಜನರು ಕಾಯುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು, ತಾಲ್ಲೂಕು ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆ ಇದೆ. ರಾಷ್ಟ್ರಕವಿ ಕುವೆಂಪು ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಸಾಹಿತ್ಯ ವಲಯದವರು ಒತ್ತಾಸೆಯಾಗಿದೆ.

ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ಬೇಕು

ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆಯಾಗಬೇಕು. ಈ ಬಗ್ಗೆ 2003ರಲ್ಲಿ ಸರ್ಕಾರಿ ಪ್ರಕಟಣೆ ಆಗಿತ್ತು. ಕಾರ್ಪೊರೇಷನ್ ಕಾಯ್ದೆಗೆ ತಿದ್ದು‍ ತಂದು ರಚಿಸಲಾಗುವುದು ಎಂದು ಹೇಳಿದ್ದರು. 2020–2025ರ ಕೈಗಾರಿಕಾ ನೀತಿಯಲ್ಲೂ ಹೇಳಲಾಗಿದೆ. 2021–22ರ ಬಜೆಟ್‌ನಲ್ಲೂ ಪ್ರಕಟಿಸಲಾಗಿತ್ತು. ಆದರೆ, ಈವರೆಗೂ ಆಗಿಲ್ಲ. ಈ ಬಜೆಟ್‌ನಲ್ಲಾದರೂ ಕ್ರಮ ಕೈಗೊಳ್ಳಬೇಕು. ಸದ್ಯ ಹೂಟಗಳ್ಳಿ ನಗರಸಭೆಗೆ ಹಾಗೂ ಕೆಐಎಡಿಬಿಗೆ ನಿರ್ವಹಣಾ ವೆಚ್ಚ ಪಾವತಿಸುತ್ತಿದ್ದೇವೆ. ಆದರೆ, ಅವು ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ, ₹ 50 ಕೋಟಿ ಮೂಲಧನದೊಂದಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚಿಸಿ, ಆಡಳಿತಾಧಿಕಾರಿ ನೇಮಿಸಬೇಕು. ಇದು, ಮೂಲಸೌಲಭ್ಯಗಳ ಕೊರತೆ ನಿವಾರಣೆಗೆ, ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ.

ಸುರೇಶ್‌ಕುಮಾರ್‌ ಜೈನ್, ಪ್ರಧಾನ ಕಾರ್ಯದರ್ಶಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರಿಷತ್ತು

₹ 100 ಕೋಟಿ ವಿಶೇಷ ಅನುದಾನ ಕೊಡಿ

ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಲು ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳಿಗಾಗಿ ₹ 100 ಕೋಟಿ ವಿಶೇಷ ಅನುದಾನ ನೀಡಬೇಕು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು. ನಗರದಲ್ಲಿ ಹೊಸ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸಬೇಕು. ಮೈಸೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕತೇರ ಹುದ್ದೆಗಳನ್ನು ಭರ್ತಿ ಮಾಡಬೇಕು.

ಡಾ.ಈ.ಸಿ.ನಿಂಗರಾಜ್ ಗೌಡ, ಸಿಂಡಿಕೇಟ್ ಸದಸ್ಯ, ಮೈಸೂರು ವಿಶ್ವವಿದ್ಯಾಲಯ

ವಿಶೇಷ ಅನುದಾನ ನೀಡಬೇಕು

ಮೈಸೂರು ಮಹಾನಗರಪಾಲಿಕೆಗೆ ಹಾಗೂ ಮೈಸೂರಿನ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ವಿಶೇಷ ಅನುದಾನ ಒದಗಿಸಬೇಕು. ಇಂತಿಷ್ಟು ಅನುದಾನವನ್ನು ಪ್ರತಿ ಬಜೆಟ್‌ನಲ್ಲೂ ಕಾಯ್ದಿರಿಸಬೇಕು. ಪಾರಂಪರಿಕ ನಗರಿ ಎಂಬ ಬಿರುದು ಹೋಗದಂತೆ ನೋಡಿಕೊಳ್ಳಬೇಕು. ಹಲವು ಪಾರಂಪರಿಕ ಕಟ್ಟಡಗಳು ಕುಸಿದು ಬಿದ್ದಿವೆ. ಹಲವು ಕಟ್ಟಡಗಳು ಶಿಥಿಲಗೊಂಡಿವೆ. ಇದನ್ನು ತಡೆಯಲು ಅನುದಾನದ ಅಗತ್ಯವಿದೆ.

ಶಿವಕುಮಾರ್, ಮೇಯರ್

ಘೋಷಣೆ ಹಲವು, ಅನುಷ್ಠಾನಗೊಳ್ಳುತ್ತಿರುವುದು ಕೆಲವು!

2022–23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ ಬಹುತೇಕ ಯೋಜನೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ. ಚೆನ್ನೈ–ಬೆಂಗಳೂರು–ಮೈಸೂರು 460 ಕಿ.ಮೀ ಉದ್ದದ ಹೈಸ್ಪೀಡ್ ರೈಲ್ವೆ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರದೊಂದಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆದಿಲ್ಲ.

* ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ನಿರ್ಮಿಸುವುದಾಗಿ ಹೇಳಲಾಗಿತ್ತು. ಆದರೆ, ಅದರ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ!

* ಕೆ.ಆರ್.ಆಸ್ಪತ್ರೆ ಕಟ್ಟಡ ನವೀಕರಣಕ್ಕೆ ₹ 89 ಕೋಟಿ ಘೋಷಿಸಲಾಗಿತ್ತು. ಕಾಮಗಾರಿ ಆರಂಭವಾಗಿಲ್ಲ.

* ನವೋದ್ಯಮಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನಿಂದ ತಲಾ ₹ 20 ಕೋಟಿ ವೆಚ್ಚದಲ್ಲಿ ‘ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಫಾರ್ ಸ್ಟಾರ್ಟ್‌ಅಪ್‌’ಗಳ ಸ್ಥಾಪನೆ, ಪ್ರಸಕ್ತ ಸಾಲಿನಲ್ಲಿ ₹ 12 ಕೋಟಿ ಮೀಸಲಿಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ ಪ್ರಕ್ರಿಯೆಯಾಗಿಲ್ಲ.

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ ತಲೆಎತ್ತಿಲ್ಲ.

* ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸಲು ಮೊದಲ ಬಾರಿಗೆ ದೀನದಯಾಳ್ ಸೌಹಾರ್ದ ವಿದ್ಯಾರ್ಥಿನಿಲಯ ಯೋಜನೆಯಡಿ ಬಹುಮಹಡಿ ವಿದ್ಯಾರ್ಥಿನಿಲಯ ಸಮುಚ್ಛಯ ನಿರ್ಮಾಣಕ್ಕೆ ₹ 250 ಕೋಟಿ ಘೋಷಿಸಲಾಗಿತ್ತು. ಕಾಮಗಾರಿ ಪ್ರಾರಂಭವಾಗಿಲ್ಲ. ಗಂಗೋತ್ರಿಯಲ್ಲಿ ನಿವೇಶನ ಹೇಳಲಾಗುತ್ತಿದೆ.

* ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ₹ 30 ಕೋಟಿ ವೆಚ್ಚದಲ್ಲಿ ‘ಮೈಸೂರು ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ ಅಂಡ್ ಪ್ಲೇ’ ಸ್ಥಾಪನೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹ 10 ಕೋಟಿ ನೀಡಲಾಗುವುದು ಎಂದು ಹೇಳಲಾಗಿತ್ತು. ಇದು ಅನುಷ್ಠಾನಕ್ಕೆ ಬಂದಿಲ್ಲ.

* ಮೈಸೂರಿನಲ್ಲಿ ಅಗರಬತ್ತಿ ತಯಾರಿಕೆ ಕುರಿತು ಮೈಕ್ರೊ ಕ್ಲಸ್ಟರ್‌ಗಳ ರಚನೆ ಬಜೆಟ್‌ ಪುಸ್ತಕದಲ್ಲೇ ಉಳಿದಿದೆ.

* ಪ್ರವಾಸೋದ್ಯಮ ಉತ್ತೇಜಿಸಲು ಮೈಸೂರು–ಶ್ರೀರಂಗಪಟ್ಟಣ–ಹಾಸನ–ಬೇಲೂರು–ಹಳೇಬೀಡು ಪ್ರವಾಸಿ ವೃತ್ತ ಅಭಿವೃದ್ಧಿಪಡಿಸುವ ಕಾರ್ಯ ನಡೆದಿಲ್ಲ.

* ರಾಜ್ಯದ 15 ಪ್ರವಾಸಿ ತಾಣಗಳ ಎಆರ್‌/ವಿಆರ್ ತುಣುಕುಗಳನ್ನು ₹ 15 ಕೋಟಿ ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಪ್ರಾಯೋಗಿಕ ಅನುಷ್ಠಾನಕ್ಕೆ ಮೈಸೂರು ಅರಮನೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಇದು ಏನಾಗಿದೆ ಎನ್ನುವುದು ಅಧಿಕಾರಿಗಳ ಬಳಿಯೂ ಮಾಹಿತಿ ಇಲ್ಲ!

ವಾಪಸ್ ಪಡೆಯಿರಿ

ಕೃಷಿಗೆ ಮತ್ತು ರೈತಾಪಿ ವರ್ಗಕ್ಕೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು. ಇದನ್ನು ಬಜೆಟ್‌ನಲ್ಲೇ ಘೋಷಿಸಬೇಕು

– ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ

ಹಣ ಒದಗಿಸಿ

ನಾಗನಹಳ್ಳಿ ಸ್ಯಾಟಲೈಟ್ ರೈಲು ನಿಲ್ದಾಣಕ್ಕೆ ಭೂಸ್ವಾಧೀನಕ್ಕೆ ಹಣ ಒದಗಿಸಬೇಕು. ಕುಕ್ಕರಹಳ್ಳಿ ಕೆರೆ ಸೇರಿದಂತೆ ರೈಲ್ವೆ ಗೇಟ್ ಬಳಿ ಕೆಳಸೇತುವೆ ನಿರ್ಮಿಸಲು ಹಣ ನೀಡಬೇಕು.

–ರಾಕೇಶ್ ಭಟ್, ಮುಖಂಡ

ಅನುದಾನ ಕೊಡಿ

ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಅನುದಾನ ಒದಗಿಸಬೇಕು.

–ವಿಕ್ರಂ ಅಯ್ಯಂಗಾರ್, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.