ADVERTISEMENT

ಮೈಸೂರಿನಲ್ಲಿ ಸಿನಿತಾರೆಗಳ ಸಮಾಗಮ: ರಾಜ್ಯ ಪ್ರಶಸ್ತಿ ಸಂಭ್ರಮ

2018, 2019ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:53 IST
Last Updated 4 ನವೆಂಬರ್ 2025, 7:53 IST
<div class="paragraphs"><p>ಮೈಸೂರಿನಲ್ಲಿ ಸೋಮವಾರ ನಡೆದ 2018 ಹಾಗೂ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ</p></div>

ಮೈಸೂರಿನಲ್ಲಿ ಸೋಮವಾರ ನಡೆದ 2018 ಹಾಗೂ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ

   

ಮೈಸೂರು: ‘ಚಂದನವನ’ದ ತಾರೆಗಳ ಸಮಾಗಮದಲ್ಲಿ 2018, 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸಂಭ್ರಮದಿಂದ ನಡೆಯಿತು.

ಕನ್ನಡ ಚಲನಚಿತ್ರ ರಂಗದ ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗದ 83 ಪ್ರಶಸ್ತಿಗಳನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ADVERTISEMENT

‘ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ವಾರ್ತಾ ಇಲಾಖೆಗೆ 160 ಎಕರೆ ಹಸ್ತಾಂತರಿಸಲಾಗಿದೆ. ವರ್ಷಾಂತ್ಯಕ್ಕೆ ಡಿಪಿಆರ್ ಸಲ್ಲಿಕೆಯಾಗಲಿದೆ. ಹೈದರಾಬಾದ್ ಮಾದರಿಯಲ್ಲೇ ಫಿಲಂ ಸಿಟಿ ನಿರ್ಮಾಣ ಮಾಡಲಾಗುವುದು. 3 ವರ್ಷದಿಂದ ನೀಡಬೇಕಿರುವ ಸಿನಿಮಾ ಸಬ್ಸಿಡಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂಬ ಭರವಸೆಯನ್ನೂ ನೀಡಿದರು. 

ನಟರಾದ ಉಮಾಶ್ರೀ ಹಾಗೂ ಜೆ.ಕೆ.ಶ್ರೀನಿವಾಸಮೂರ್ತಿ ಅವರಿಗೆ ‘ಡಾ.ರಾಜ್‌ಕುಮಾರ್ ಪ್ರಶಸ್ತಿ’, ನಿರ್ದೇಶಕರಾದ ಪಿ.ಶೇಷಾದ್ರಿ, ಎನ್‌.ಆರ್‌.ನಂಜುಂಡೇಗೌಡ ಅವರಿಗೆ ‘ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ’, ಬಿ.ಎಸ್‌.ಬಸವರಾಜು ಮತ್ತು ರಿಚರ್ಡ್‌ ಕ್ಯಾಸ್ಟಲಿನೊ ಅವರಿಗೆ  ‘ಡಾ.ವಿಷ್ಣುವರ್ಧನ್‌ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಮತ್ತು ₹5 ಲಕ್ಷ ನಗದು ಒಳಗೊಂಡಿವೆ. 

ಅತ್ಯುತ್ತಮ ನಟ ಪ್ರಶಸ್ತಿಗೆ ರಾಘವೇಂದ್ರ ರಾಜ್‌ಕುಮಾರ್‌ (ಅಮ್ಮನ ಮನೆ), ಅತ್ಯುತ್ತಮ ನಟಿ ಪ್ರಶಸ್ತಿಗೆ ಮೇಘನಾ ರಾಜ್‌ (ಇರುವುದೆಲ್ಲವ ಬಿಟ್ಟು– 2018), ಅನುಪಮಾ ಗೌಡ (ತ್ರಯಂಬಕಂ–2019) ಪ್ರಶಸ್ತಿ ಸ್ವೀಕರಿಸಿದರು. 

‘ಬೆಳ್ಳಿತೊರೆ– ಸಿನಿಮಾ ಪ್ರಬಂಧಗಳು’ ಕೃತಿಗೆ ‘ಪ್ರಜಾವಾಣಿ’ಯ ಅಭಿಮತ ಸಂಪಾದಕ ರಘುನಾಥ ಚ.ಹ. ಹಾಗೂ ಪ್ರಕಾಶಕ ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ‘ಚಲನಚಿತ್ರ ಸಾಹಿತ್ಯ ಪ್ರಶಸ್ತಿ’ಗೆ ಭಾಜನರಾದರು. ₹20ಸಾವಿರ ಮತ್ತು 50 ಗ್ರಾಂ. ಬೆಳ್ಳಿ ಪದಕ ಒಳಗೊಂಡಿದೆ.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ ಚಲನಚಿತ್ರ ನಟ ರಿಷಬ್‌ ಶೆಟ್ಟಿ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದ ಸಿನಿಮಾಗಳಿಗೆ ಸ್ಪರ್ಧೆ ನೀಡುವಂತೆ ಕನ್ನಡಿಗರು ಚಿತ್ರ ತಯಾರು ಮಾಡಬೇಕಿದೆ. ತಂತ್ರಜ್ಞಾನದ ನೆರವಿಗೆ ಬೇರೆ ರಾಜ್ಯಗಳಿಗೆ ಹೋಗುವ ಬದಲು ಇಲ್ಲಿಯೇ ಸ್ಪರ್ಧಾತ್ಮಕ ಚಿತ್ರಗಳನ್ನು ತೆಗೆಯುವುದಕ್ಕಾಗಿ ಚಿತ್ರ ನಗರಿ ನಿರ್ಮಾಣ ಆಗಬೇಕು. ಫಿಲಂ ಸಿಟಿಗೆ ಭೂಮಿ ಮಂಜೂರು ಮಾಡಿರುವುದು ಶ್ಲಾಘನೀಯ’ ಎಂದರು. 

‘ಈ ಪ್ರಶಸ್ತಿಯನ್ನು ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುವೆ’ ಎಂದು ಹೇಳಿದರು.     

ಜಯಂತ ಕಾಯ್ಕಿಣಿ, ಡಾರ್ಲಿಂಗ್ ಕೃಷ್ಣ, ಡಿ.ಸತ್ಯಪ್ರಕಾಶ್, ದಯಾಳ್‌ ಪದ್ಮನಾಭನ್, ಬಾಲಾಜಿ ಮನೋಹರ್, ತಬಲಾ ನಾಣಿ ಸೇರಿ ವಿವಿಧ ಕಲಾವಿದರು ವಿವಿಧ ವಿಭಾಗಗಳ ಪ್ರಶಸ್ತಿ ಸ್ವೀಕರಿಸಿದರು. 

‘ಪ್ರಶಸ್ತಿ: ಆಯಾ ವರ್ಷವೇ ಪ್ರದಾನ’

‘ಪ್ರಶಸ್ತಿ ವಿಳಂಬಕ್ಕೆ ಹಿಂದಿನ ಸರ್ಕಾರ ಕಾರಣ. ಕೆಲವೇ ತಿಂಗಳಲ್ಲಿ 2020 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಯಾ ವರ್ಷವೇ ಪ್ರಶಸ್ತಿ ಪ್ರದಾನ ಮಾಡಲು ವಾರ್ತಾ ಇಲಾಖೆಗೆ ಸೂಚಿಸಿರುವೆ’ ಎಂದು ಮುಖ್ಯಮಂತ್ರಿ ಹೇಳಿದರು.  ‘ಸಬ್ಸಿಡಿಗಾಗಿ ಚಿತ್ರ ಮಾಡದೇ ಉತ್ತಮ ಗುಣಾತ್ಮಕ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡಬೇಕು. ರಾಜ್‌ಕುಮಾರ್ ಅವರಂತೆ ತೆರೆಯ ಮೇಲಿನಂತೆ ನಿಜ ಜೀವನದಲ್ಲೂ ಮಾದರಿಯಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.