
ಅರುಣ್
ಕುಮಾರ್
ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸದೇ ಅನ್ಯಾಯ ಮಾಡುತ್ತಿದೆ’ ಎಂದು ರಾಜ್ಯ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಅರುಣ್ ಕುಮಾರ್ ಆರೋಪಿಸಿದರು.
ಮಾದಿಗ, ಸಮಗಾರ, ದೋಹರ, ದಕ್ಕಲಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯ ಸರ್ಕಾರವು ನ್ಯಾ. ನಾಗಮೋಹನ ದಾಸ್ ಆಯೋಗದ ಸಮೀಕ್ಷೆಯ ಶಿಫಾರಸುಗಳನ್ನು ಮೂಲೆಗೆ ತಳ್ಳಿ, ಗೊಂದಲದ ವಾತಾವರಣ ಸೃಷ್ಟಿಸಿದೆ. ನೈಜ ಆಶಯವನ್ನೇ ಬದಿಗೆ ಸರಿಸಿದೆ’ ಎಂದು ದೂರಿದರು.
‘ಮಾದಿಗರಲ್ಲದವರೂ ಪ್ರವರ್ಗ 1ರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವಕಾಶ ಕೊಟ್ಟಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿದು ಬಡ್ತಿ ಅವಕಾಶಗಳನ್ನು ಒಳ ಮೀಸಲಾತಿಯಿಂದ ಹೊರಗಿಡಲಾಗಿದೆ’ ಎಂದು ಆರೋಪಿಸಿದರು.
‘ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೀಸಲಾತಿಯಲ್ಲಿನ ಗೊಂದಲದಿಂದ ಮಾದಿಗ ಮತ್ತು ಇತರ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪರಿಹಾರ ಕಂಡು ಮುಖ್ಯಮಂತ್ರಿ ಗಮನಕ್ಕೆ ತರಬೇಕು. ಬಳಿಕ ಸರ್ಕಾರವು ನ್ಯಾಯಯುತ ಮಾದರಿಯಲ್ಲಿ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾ ಸಂಚಾಲಕ ಜಿ.ಶ್ರೀನಿವಾಸ್, ಮಾದಿಗ ಸಂಘಟನೆಗಳ ಒಕ್ಕೂಟದ ಸಂಚಾಲಕ ಎನ್.ಸ್ವಾಮಿ, ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಶಿವಣ್ಣ ಹುಳಿಮಾವು, ಜ್ಯೋತಿ ಯುವಕರ ಸಂಘದ ಸಲಹೆಗಾರ ಸುಬ್ರಮಣಿ, ರಾಜ್ಯ ಭೀಮಸೇನೆ ಪ್ರಧಾನ ಕಾರ್ಯದರ್ಶಿ ಧರ್ಮರಾಜ್, ಮುಖಂಡ ಬಿ.ಎಸ್.ಸುಬ್ರಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.